ಶಿರಸಿ : ಹೆಂಡತಿಯ ಶೀಲ ಶಂಕಿಸಿ ಆಕೆಯ ತಲೆಗೆ ಹೊಡೆದು ಕೊಲೆಗೈದ ಅಪರಾಧಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ನೀಡುವಂತೆ ಆದೇಶ ನೀಡಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರಿನಲ್ಲಿ 2015ರ ಡಿಸೆಂಬರ್ 4ರಂದು ಗಂಗಯ್ಯ ಸುರಗಿಮಠ ಎಂಬಾತ ತನ್ನ ಹೆಂಡತಿಗೆ ಅಕ್ರಮ ಸಂಬಂಧ ಇದೇ ಎಂದು ಆಕೆಯ ಶೀಲ ಶಂಕಿಸಿದ್ದ. ನಂತರ ತನಗೆ ಹಣ ಬೇಕು, ತವರುಮನೆಗೆ ಹೋಗಿಯಾದರೂ ತೆಗೆದುಕೊಂಡು ಬಾ ಎಂದು ಬೆದರಿಕೆ ಹಾಕುತ್ತಿದ್ದ. ಈ ವೇಳೆ ಆತನ ಪತ್ನಿ ಅಕ್ಕಮ್ಮ ಇವೆಲ್ಲವೂ ನನ್ನ ತವರು ಮನೆಯವರೇ ಕೊಟ್ಟಿದ್ದು ಮತ್ತೆ ನಾನು ಹೋಗಿ ಹಣ ಕೇಳುವುದಿಲ್ಲ ಎಂದಾಗ ಬಡಿಗೆಯಿಂದ ಆಕೆಯ ಕುತ್ತಿಗೆಗೆ ಹಾಗೂ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದ.
ನಂತರ ಅಕ್ಕಮ್ಮನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ಕಾಲ ಜೀವನ್ಮರಣದ ಜೊತೆ ಹೋರಾಡಿದ ಅಕ್ಕಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ 13 ಸಾಕ್ಷಿದಾರರನ್ನು ವಿಚಾರಿಸಿ ಹಲವು ಸಾಕ್ಷಿ ಪರಿಶೀಲಿಸಿ, ಅಪರಾಧಿ ಗಂಗಯ್ಯ ಸುರಗಿಮಠನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೇ ಅಕ್ಕಮ್ಮನ ಮೂವರು ಮಕ್ಕಳಿಗೆ ದಂಡದ ಹಣದಲ್ಲಿ ತಲಾ ಪ್ರತಿಯೊಬ್ಬರಿಗೆ 15 ಸಾವಿರ ನೀಡುವಂತೆ ತಿಳಿಸಿದ್ದಾರೆ. ಸರ್ಕಾರದ ಪರ ಸರಕಾರಿ ಅಭಿಯೋಜಕರಾದ ಸುನಂದಾ ಐ. ಮಡಿವಾಳ ವಾದಿಸಿದ್ದಾರೆ.