ಶಿರಸಿ: ಹಂಪಿ, ಕಿತ್ತೂರು, ಕರಾವಳಿ ಹೀಗೆ ರಾಜ್ಯದ ಹಲವು ಉತ್ಸವಗಳು ಪ್ರತಿ ಬಾರಿಯೂ ಅದ್ಧೂರಿಯಾಗಿ ನಡೆಯುತ್ತದೆ. ಆದರೆ, ಸರ್ಕಾರದ ಅಧಿಕೃತ ಉತ್ಸವಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವ ನಡೆಸುವಾಗ ಮಾತ್ರ ಪ್ರತಿ ಬಾರಿಯೂ ಒಂದಿಲ್ಲೊಂದು ವಿಘ್ನ ಎದುರಾಗುತ್ತಿದ್ದು, ಇದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.
ಕನ್ನಡದ ಮೊದಲ ರಾಜಧಾನಿಯಾದ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವವನ್ನು ಸರ್ಕಾರ ಅಧಿಕೃತ ಉತ್ಸವಗಳಲ್ಲಿ ಒಂದು ಎಂದು ಹೆಸರಿಸಿದೆ. ಕದಂಬೋತ್ಸವ ಕನ್ನಡದ ಮೊದಲ ರಾಜಧಾನಿಯ ವೈಭವೀಕರಣದ ಜೊತೆಗೆ ಆದಿ ಕವಿ ಪಂಪನ ನೆನಪಿನಿಂದಲೂ ಪ್ರಚಲಿತ. ಆದರೆ, ಕಳೆದ 2 ವರ್ಷಗಳಿಂದ ಈ ಉತ್ಸವವೇ ನಡೆದಿಲ್ಲ. 2020 ರ ಫೆಬ್ರವರಿಯಲ್ಲಿ ಉತ್ಸವ ನಡೆಸಲಾಗಿದ್ದು, ಆಗ ಸಹ 2 ವರ್ಷದ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಇದನ್ನೂ ಓದಿ: ಬನವಾಸಿಯಲ್ಲಿ ಕದಂಬೋತ್ಸವ: ಗಮನ ಸೆಳೆದ ಸಂಪಾದಕರ ಸಂವಾದ
ಬನವಾಸಿಯ ವೈಭವ ಅರಿತು ರಾಜ್ಯ ಸರ್ಕಾರ 1996 ರಿಂದ ಕದಂಬೋತ್ಸವ ಆಚರಣೆಗೆ ಮುಂದಾಗಿದೆ. ಆದರೆ, ಇತ್ತೀಚಿಗೆ ಅದರ ಪ್ರಭಾವ ಕಡಿಮೆಯಾಗಿದೆ. ಇದಕ್ಕೆ ಕಾರಣ ರಾಜಕೀಯ ಇಚ್ಚಾಶಕ್ತಿ. ಇದಲ್ಲದೇ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಎರಡು ಬಾರಿ ಉತ್ಸವ ನಡೆಸಿರಲಿಲ್ಲ. ಆದ ಕಾರಣ ಈ ಬಾರಿ ಮಾಡಬೇಕು ಎಂಬುದು ಸ್ಥಳೀಯರ ಹಕ್ಕೊತ್ತಾಯ.
ಇದನ್ನೂ ಓದಿ: ಅದ್ಧೂರಿ ಕದಂಬೋತ್ಸವದಲ್ಲಿ ಜಾನುವಾರು ಮೇಳ ಆಕರ್ಷಣೆ
ಇನ್ನೊಂದೆಡೆ, ಈ ಬಾರಿ ಬನವಾಸಿ ಪಕ್ಕದ ಯಲ್ಲಾಪುರ ಮತ್ತು ಮುಂಡಗೋಡು ತಾಲೂಕಿನಲ್ಲಿ ಜಾತ್ರೆಯಿದೆ. ಇದೆಲ್ಲವೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ಆದ ಕಾರಣ ಈ ಬಾರಿಯೂ ಕದಂಬೋತ್ಸವ ನಡೆಸುವುದು ಕಷ್ಟ ಎನ್ನಲಾಗುತ್ತಿದೆ. ಆದರೆ, ಸಚಿವ ಹೆಬ್ಬಾರ್ ಮಾತ್ರ ಕದಂಬೋತ್ಸವ ನಡೆಸುವ ಕುರಿತು ಮುಂದಿನ 15 ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.