ಕಾರವಾರ(ಉತ್ತರಕನ್ನಡ): ಉತ್ತರಕನ್ನಡದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇಂದು 900ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 600 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಅದಕ್ಕಿಂತಲೂ ಹೆಚ್ಚಿನ ಪ್ರಕರಣಗಳು ದೃಢವಾಗುವ ಸಾಧ್ಯತೆಗಳಿದ್ದು, ಅದರಲ್ಲಿ ನೌಕಾನೆಲೆ ಹಾಗು ಮೆಡಿಕಲ್ ಕಾಲೇಜು ಸೇರಿ ಕಾರವಾರದಲ್ಲೇ ಹೆಚ್ಚಿನ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 25 ಶಿಕ್ಷಣ ಸಂಸ್ಥೆಗಳನ್ನ ಕ್ಲಸ್ಟರ್ ಆಗಿ ಘೋಷಿಸಿ ಬಂದ್ ಮಾಡಲಾಗಿದೆ ಎಂದರು.
5 ಪಾಸಿಟಿವ್ ಪ್ರಕರಣ ಪತ್ತೆಯಾದ ಶಾಲೆಗಳನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗುತ್ತಿದೆ. ಅದರಂತೆ ಇಂದು ದಾಂಡೇಲಿ 4, ಹೊನ್ನಾವರ 3 ಹಾಗು ಯಲ್ಲಾಪುರ, ಶಿರಸಿ, ಕುಮಟಾದಲ್ಲಿ ತಲಾ ಒಂದು ಸೇರಿ ಮತ್ತೆ 10 ಶಾಲೆಗಳನ್ನ ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.
ಇನ್ನು ದಾಂಡೇಲಿ ನಗರದ 8 ಶಾಲೆಗಳಲ್ಲಿ ಕ್ಲಸ್ಟರ್ ನಿರ್ಮಾಣ ಹಿನ್ನಲೆ ಜನವರಿ 21 ರಿಂದ 26ರ ವರೆಗೆ ನಗರದ 1 ರಿಂದ 8ನೇ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ನಗರದ 9, 10ನೇ ತರಗತಿಗಳು, ಪಿಯುಸಿ ಹಾಗೂ ಪದವಿ ತರಗತಿಗಳನ್ನ 50 ಶೇಕಡಾ ಭರ್ತಿಯೊಂದಿಗೆ ನಡೆಸಲು ಸೂಚನೆ ನೀಡಲಾಗಿದೆ.
ಈಗಾಗಲೇ ಕಾರವಾರದಲ್ಲಿ 20 ಸೇರಿ ಜಿಲ್ಲೆಯಾದ್ಯಂತ 39 ಮೈಕ್ರೋ ಕಂಟೈನ್‌ಮೆಂಟ್ ಝೋನ್‌ಗಳನ್ನ ಗುರುತಿಸಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗಿರುವ ಪಾಸಿಟಿವ್ ಪ್ರಕರಣಗಳ ಪೈಕಿ ಸದ್ಯ 18 ವರ್ಷದೊಳಗಿನ 554 ಹಾಗೂ 18 ವರ್ಷ ಮೇಲ್ಪಟ್ಟ 508 ಮಂದಿ ವಿದ್ಯಾರ್ಥಿಗಳು ಸೋಂಕಿತರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಓದಿ: ಹಾಲು ಒಕ್ಕೂಟಗಳಲ್ಲಿ ದುಬಾರಿ ವೆಚ್ಚ, ಭ್ರಷ್ಟಾಚಾರ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ