ಕಾರವಾರ(ಉತ್ತರ ಕನ್ನಡ): ರಾಜ್ಯದಲ್ಲೇ ಮೊದಲ ಬಾರಿಗೆ ಕಾರವಾರದಲ್ಲಿ ತೇಲುವ ಕಾಂಕ್ರೀಟ್ ಜಟ್ಟಿ ನಿರ್ಮಾಣ ಮಾಡಲಾಗುತ್ತಿದೆ. ಗಾಳಿ, ಮಳೆ, ಅಲೆಗಳ ಅಬ್ಬರದ ನಡುವೆಯೂ ಈ ಜಟ್ಟಿ ಬಳಿ ಸುಲಭವಾಗಿ ಬೋಟ್ಗಳು ನಿಲ್ಲಲು ಸಾಧ್ಯವಾಗಿರುವುದುದರಿಂದ ಸದ್ಯ ಕರಾವಳಿಯಲ್ಲಿ ಬಂದರು ಇಲಾಖೆ ಈ ಪ್ರಯೋಗ ಎಲ್ಲರ ಗಮನ ಸೆಳೆದಿದೆ.
ಹೌದು, ರಾಜ್ಯದಲ್ಲಿಯೇ ಅತ್ಯಂತ ಉದ್ದದ ಕಡಲ ತೀರ ಪ್ರದೇಶವನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರಗಳಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅದರಲ್ಲಿಯೂ ಮೀನುಗಾರಿಕೆ, ಜಲ ಸಾಹಸಿ ಚಟುವಟಿಕೆ ಪ್ರದೇಶಗಳಲ್ಲಿ ಬೋಟ್ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಮೀನುಗಾರರು, ಪ್ರವಾಸಿಗರು ಪರದಾಡುವ ಸ್ಥಿತಿ ಇದೆ. ಆದರೆ ಇದೀಗ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ತೇಲುವ ಕಾಂಕ್ರೀಟ್ ಜಟ್ಟಿಯನ್ನು ಕರಾವಳಿ ತೀರಕ್ಕೆ ಪರಿಚಯಿಸಲಾಗಿದೆ.
ರಾಜ್ಯದಲ್ಲಿಯೇ ಮೊದಲ ಪ್ರಯೋಗ: ಕಾರವಾರ ತಾಲೂಕಿನ ಸದಾಶಿವಗಡದ ಬಳಿ ಕಾಳಿ ನದಿ ಅರಬ್ಬೀ ಸಮುದ್ರ ಸೇರುವ ಸಂಗಮ ಪ್ರದೇಶದಲ್ಲಿ ರಾಜ್ಯದಲ್ಲೇ ಮೊದಲ ತೇಲುವ ಕಾಂಕ್ರೀಟ್ ಜಟ್ಟಿಯನ್ನು ಬಂದರು ಇಲಾಖೆ ನಿರ್ಮಾಣ ಮಾಡಿದೆ. ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ 2.70 ಕೋಟಿ ವೆಚ್ಚದಲ್ಲಿ ಜಟ್ಟಿ ಸಿದ್ಧಗೊಂಡಿದ್ದು, ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದೆ. 12 ಮೀ ಉದ್ದ, 3 ಮೀ. ಅಗಲವಿರುವ ಈ ಕಾಂಕ್ರೀಟ್ ಜಟ್ಟಿಗೆ 20 ಮೀ. ಉದ್ದದ ಅಲ್ಯೂಮಿನಿಯಂ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲಾಗಿದೆ.
"ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಸದ್ಯ ತೇಲುವ ಜಟ್ಟಿ ನಿರ್ಮಾಣಗೊಂಡಿದೆ. ಈ ಜಟ್ಟಿಯಿಂದ ಮುಂದಿನ ದಿನಗಳಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿಗೆ ಅನುಕೂಲವಾಗಲಿದೆ. ಗಾಳಿ, ಮಳೆಯ ಸಂದರ್ಭದಲ್ಲೂ ಜಟ್ಟಿಯಲ್ಲಿ ಬೋಟುಗಳ ನಿಲುಗಡೆ ಸಾಧ್ಯವಾಗಲಿದೆ. ಪ್ರವಾಹದಂತಹ ವಿಕೋಪ ಸಂದರ್ಭಗಳಲ್ಲಿ ಸಹ ಸಾರ್ವಜನಿಕ ಬೋಟುಗಳ ನಿಲುಗಡೆಗೆ ಇದು ಸಹಕಾರಿಯಾಗಲಿದೆ"-ಪ್ರಕಾಶ್ ಹರಿಕಾಂತ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಅಧ್ಯಕ್ಷ.
ಇನ್ನು ತೇಲುವ ಕಾಂಕ್ರೀಟ್ ಜಟ್ಟಿಯನ್ನ ರಾಜ್ಯ ಬಂದರು ಇಲಾಖೆ ಉತ್ತರ ಕನ್ನಡದ 4 ಹಾಗೂ ಉಡುಪಿ, ಮಂಗಳೂರು ಸೇರಿ ಒಟ್ಟು 10ಕ್ಕೂ ಹೆಚ್ಚು ಸ್ಥಳದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ನದಿ ಹಾಗೂ ಸಮುದ್ರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಬೋಟು ನಿಲುಗಡೆಗೆ ಈ ಮೊದಲು ಫೈಬರ್ ಮಾದರಿಯ ತೇಲುವ ಜಟ್ಟಿಗಳನ್ನ ಬಳಸಲಾಗುತ್ತಿತ್ತು. ಆದರೆ ಸಮುದ್ರದಲ್ಲಿ ಹೆಚ್ಚು ಏರಿಳಿತವಿರುವಾಗ ಜಟ್ಟಿಯಲ್ಲಿ ಬೋಟು ನಿಲುಗಡೆಗೆ ಸಾಧ್ಯವಾಗುತ್ತಿರಲಿಲ್ಲ. ಈ ಜಟ್ಟಿ ಕಾಂಕ್ರಿಟ್‌ನಿಂದ ಮಾಡಲ್ಪಟ್ಟಿದ್ದು, ತಳಭಾಗದಲ್ಲಿ ರಬ್ಬರ್ ಕೋಟಿಂಗ್ ಇದೆ. ಮಳೆ, ಗಾಳಿಯಲ್ಲೂ ಜಟ್ಟಿ ಹೆಚ್ಚು ಸ್ಥಿರವಾಗಿರಲಿದೆ.
'ಈ ಜಟ್ಟಿಯಲ್ಲಿ ಬ್ಯಾಟರಿ ಚಾರ್ಜಿಂಗ್, ನ್ಯಾವಿಗೇಶನ್‌ನಂತಹ ವ್ಯವಸ್ಥೆಗಳಿದ್ದು ಬೋಟ್ ನಿಲುಗಡೆಗೆ ನೆರವಾಗಲಿದೆ. ಇನ್ನು ತೇಲುವ ಕಾಂಕ್ರೀಟ್ ಜಟ್ಟಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲವಾಗಲಿದೆ. ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು' ಎನ್ನುತ್ತಾರೆ ಸ್ಥಳೀಯರು.
ಏನಿದು ತೇಲುವ ಕಾಂಕ್ರೀಟ್ ಜಟ್ಟಿ?: ನದಿ ಅಥವಾ ಸಮುದ್ರದಲ್ಲಿ ದೋಣಿಗಳ ನಿಲುಗಡೆಗೆ ಅನುಕೂಲವಾಗುವಂತೆ ತಾತ್ಕಾಲಿಕ ಜಟ್ಟಿ ಸ್ಥಾಪಿಸಲು ಈ ಮೊದಲು ಅಧಿಕ ಸಾಂದ್ರತೆಯ ಪಾಲಿಥಿನ್ ಬಳಸಲಾಗುತ್ತಿತ್ತು. ಕಾಂಕ್ರೀಟ್ ಜಟ್ಟಿ ವಿಭಿನ್ನವಾದದ್ದು. ರಬ್ಬರ್ ತಳಹದಿಗೆ ಕಾಂಕ್ರೀಟ್ ಅಳವಡಿಸಿ ಸಮತಟ್ಟಾದ ಆಯತಾಕಾರದ ನೆಲಹಾಸು ರಚನೆ ಮಾಡಲಾಗಿರುತ್ತದೆ. ಅವುಗಳಿಗೆ 4 ಕಡೆ ಆ್ಯಂಕರ್ ಜೋಡಿಸಿ ನೀರಿನಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ನೀರಿನ ಉಬ್ಬರ ಇಳಿತಕ್ಕೆ ತಕ್ಕಂತೆ ಅವು ಕೂಡ ಚಲನೆಯಾಗುತ್ತವೆ. ಇವು ಬೋಟ್ ನಿಲುಗಡೆಗೆ ಅನುಕೂಲವಾಗುತ್ತವೆ.
ಒಟ್ಟಾರೆ ತೇಲುವ ಕಾಂಕ್ರೀಟ್ ಜಟ್ಟಿ ನಿರ್ಮಾಣದಿಂದ ಜಲಸಾಹಸ ಕ್ರೀಡಾ ತರಬೇತಿಗೆ ಅನುಕೂಲವಾಗುವುದರ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಬಂದರು ಇಲಾಖೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಒದಗಿಸಿಕೊಡಲಿ ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಕೋಸ್ಟ್ ಗಾರ್ಡ್ಗೆ ಕೊನೆಗೂ ದಕ್ಕಿದ ಜಟ್ಟಿ: ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ತೀರ್ಮಾನ