ಶಿರಸಿ : ಎರಡು ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೋಳಿ ಸಂದರ್ಭದಲ್ಲಿ ಕಾಣಸಿಗುವ ಬೇಡರ ವೇಷಧಾರಿಗಳ ಕುಣಿತ ಬುಧವಾರದಿಂದ ಪ್ರಾರಂಭವಾಗಿದೆ.
ಕಳೆದೊಂದು ತಿಂಗಳಿನಿಂದ ಗಲ್ಲಿ ಗಲ್ಲಿಯಲ್ಲಿ ತಾಲೀಮು ನಡೆಸಿದ್ದ ತಂಡಗಳು ಇದೀಗ ತಮ್ಮ ಪ್ರದರ್ಶನ ನೀಡುತ್ತಿವೆ. ಎಲ್ಲೂ ಕಾಣ ಸಿಗದ ವಿಶಿಷ್ಟವಾದ ಜನಪದ ಕಲೆ ಇದಾಗಿದ್ದು, ಬೇಡರ ವೇಷಧಾರಿಗಳು ಹೋಳಿಯ ಮೆರುಗನ್ನು ಹೆಚ್ಚಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆ ಶಿರಸಿಯ ವಿವಿಧ ಸರ್ಕಲ್‍ಗಳಲ್ಲಿ, ಗಲ್ಲಿಗಳಲ್ಲಿ ಬೇಡರ ವೇಷದ ತಾಲೀಮು ಮಾಡಿದ್ದಾರೆ. ಈ ತಾಲೀಮನ್ನು ಪ್ರತಿದಿನ ಒಂದೆರಡು ತಾಸು ನಡೆಸಲಾಗುತ್ತದೆ. ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ವೇಷಧಾರಿಯ ದೇಹ, ಮನಸ್ಸು ಬೇಡರ ಕುಣಿತಕ್ಕೆ ಒಗ್ಗಿಕೊಂಡಿರುತ್ತದೆ. ಇದರಲ್ಲಿ ಕೆಲವಷ್ಟು ಸಾಂಪ್ರದಾಯಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಹೋಳಿ ಹುಣ್ಣಿಮೆಗಿಂತ ಪೂರ್ವದಲ್ಲಿ ಶಿರಸಿಯಲ್ಲಿ ನಾಲ್ಕೈದು ದಿನ ಬೇಡರ ವೇಷಧಾರಿಗಳು ವಿವಿಧ ಪ್ರದೇಶಗಳಿಂದ ಬಂದು ಕುಣಿಯುತ್ತಾರೆ.
ಕೆಂಪುವರ್ಣ, ನವಿಲುಗರಿ, ಖಡ್ಗ ಹಿಡಿದುಕೊಂಡು ಕುಣಿಯುವ ಬೇಡರನ್ನು ನೋಡಲು ಶಿರಸಿಯಲ್ಲಿ ಸಾವಿರಗಟ್ಟಲೆ ಜನ ರಾತ್ರಿ ವೇಳೆ ಸೇರುತ್ತಾರೆ. ಬೆಳಗಿನ ಜಾವದವರೆಗೂ ಈ ಕುಣಿತ ನಡೆಯುತ್ತದೆ. ಶಿರಸಿಯ ವಿವಿಧ ಭಾಗಗಳಿಂದ, ಓಣಿ, ಗಲ್ಲಿಗಳಿಂದ ಹೊರ ಬರುವ ಬೇಡರ ವೇಷಧಾರಿಗಳು ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡುತ್ತಾರೆ.
ಇನ್ನು ಬೇಡರ ವೇಷದಲ್ಲಿ ಈ ಬಾರಿ ಒಟ್ಟು 49 ತಂಡಗಳು ಭಾಗವಹಿಸಿವೆ. ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 16, ನಗರ ಠಾಣೆ ವ್ಯಾಪ್ತಿಯಲ್ಲಿ 21 ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 3 ತಂಡಗಳು ಕುಣಿಯುತ್ತಿವೆ. ಬೇಡರ ವೇಷದ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆಗಳಲ್ಲಿ ರತಿ ಕಾಮಣ್ಣರ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಹೋಳಿಯ ದಿನ ಬಣ್ಣ ಎರಚಿ ಸಂಭ್ರಮಿಸಿ ಮೂರ್ತಿಯನ್ನು ಪದ್ಧತಿ ಪ್ರಕಾರ ಸುಡಲಾಗುತ್ತದೆ. ಈ ಬಾರಿ ಕೊರೊನಾ ಭಯದ ನಡುವೆಯೂ ಬೇಡರ ವೇಷ ಶಿರಸಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ಕೊರೊನಾ ಹಿನ್ನೆಲೆ ಸಾಂಪ್ರದಾಯಿಕ ಜಾನಪದ ಕಲೆ ಮೂರು ದಿನಗಳಿಗೇ ಸೀಮಿತವಾಗುವ ಲಕ್ಷಣಗಳು ಕಾಣಿಸುತ್ತಿವೆ.