ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕಾನಸೂರು ಬಳಿಯ ಬಾಳೂರಿನಲ್ಲಿ ನಡೆದ ಕಾಡುಕೋಣ ಬೇಟೆ ಪ್ರಕರಣದಲ್ಲಿ ಶಿರಸಿ ಮತ್ತು ಸಿದ್ದಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಳೂರು ಸಮೀಪದ ಕಾಡಿನಲ್ಲಿ ಬೃಹತ್ ಕಾಡುಕೋಣ ಮೃತಪಟ್ಟು ಸಾಕಷ್ಟು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಶಿರಸಿ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಓರ್ವ ಆರೋಪಿಯನ್ನು ಹಾಗೂ ಉಳಿದ 6 ಜನ ಆರೋಪಿಗಳನ್ನು ಸಿದ್ದಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಕಸ್ತೂರ್ ಬಾ ನಗರದ ಹಾರಿಸ್ ಖಾನ್ (21), ಫೈರೋಜ್ ಖಾನ್ (38), ಅದ್ನಾನ್ ಶೇಖ್ (22), ಮಹಮ್ಮದ್ ಇಕ್ಬಾಲ್ ಶೇಖ್ (60), ಖಾಲಿದ್ ಖಾನ್ (22), ಅಬ್ದುಲ್ ಸುಬಾನ್ ಖಾನ್ (50) ಹಾಗೂ ಮಹಮ್ಮದ್ ಸಾಬ್ (63) ಬಂಧಿತ ಆರೋಪಿಗಳಾಗಿದ್ದಾರೆ.
ಶಿರಸಿ ಮಾರುಕಟ್ಟೆ ಠಾಣೆಯ ಪೊಲೀಸರಿಂದ ಬಂಧಿತನಾಗಿದ್ದ ಹಾರಿಸ್ ಖಾನ್ನಿಂದ ಬಂದೂಕನ್ನು ವಶಪಡಿಸಿಕೊಂಡಿದ್ದು ಆತ ನೀಡಿದ ಹೇಳಿಕೆಯ ಮೇರೆಗೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ 6 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೇಟೆಗೆ ಬಳಸಿದ್ದರು ಎನ್ನಲಾದ ಸ್ಕಾರ್ಪಿಯೋ ಕಾರನ್ನೂ ಜಪ್ತಿ ಮಾಡಲಾಗಿದೆ.
ಕಾಡುಕೋಣದ ಸಾವನ್ನು ಅರಣ್ಯ ಇಲಾಖೆ ಸಹಜವೆಂದು ಹೇಳಿದ್ದರೂ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಅದರ ಹೊಟ್ಟೆಯಲ್ಲಿ ಮೂರು ಗುಂಡು ಪತ್ತೆಯಾದ ಕಾರಣ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.