ಕಾರವಾರ: ಮೀಟರ್ ಬಡ್ಡಿಯವರ ಕಿರುಕುಳದಿಂದ ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹೊನ್ನಾವರ ತಾಲೂಕು ಆಸ್ಪತ್ರೆ ಎದುರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನೇತ್ರಾವತಿ ಅಂಬಿಗ ಆತ್ಮಹತ್ಯೆ ಮಾಡಿಕೊಂಡ ಅಂಗನವಾಡಿ ಕಾರ್ಯಕರ್ತೆ. ಮೀಟರ್ ಬಡ್ಡಿ ನಡೆಸುವ ವಿಮಲ್ ನಾಯ್ಕ ಎಂಬುವವನ ಬಳಿ ನೇತ್ರಾವತಿ ಸಾಲ ಪಡೆದಿದ್ದರು. ಆದರೆ ಹಣ ತೀರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ಅವಾಜ್ ಹಾಕಿದ್ದಲ್ಲದೆ, ಅಂಗನವಾಡಿಗೂ ತೆರಳಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ಘಟನೆ ಬಳಿಕ ನಾಪತ್ತೆಯಾಗಿದ್ದ ಮಹಿಳೆ ಶರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಅದರಂತೆ ಇಂದು ಮಹಿಳೆಯ ಮೃತದೇಹ ಕಳಸಿನಮೋಟೆ ಬಳಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಮೀಟರ್ ಬಡ್ಡಿಯವರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು, ಮಹಿಳೆ ಶವ ಪತ್ತೆಯಾಗುತ್ತಿದ್ದಂತೆ ಹೊನ್ನಾವರ ಸರ್ಕಾರಿ ಆಸ್ಪತ್ರೆ ಎದುರು ಜಮಾಯಿಸಿದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದ್ದು, ಮೀಟರ್ ಬಡ್ಡಿ ನಡೆಸುವ ವಿಮಲ್ ನಾಯ್ಕನನ್ನು ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಥಳಕ್ಕೆ ಎಎಸ್ಪಿ ನಿಖಿಲ್ ಬುಳ್ಳಾವರ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.