ಉಡುಪಿ: ಕೊರೊನಾ ಸೋಂಕಿಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ವಿಜಯ ಬ್ಯಾಂಕ್ ನಿವೃತ್ತ ಡಿಜಿಎಂ ಅಜೆಕಾರು ನಿವಾಸಿ ಬಾಲಕೃಷ್ಣ ಶೆಟ್ಟಿ ಮೃತಪಟ್ಟಿದ್ದರು. ಕುಟುಂಬಸ್ಥರು ಬರುವ ಮೊದಲೇ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ವೈದ್ಯರು ಸ್ವಯಂ ಸೇವಕರಿಂದ ಅಂತ್ಯ ಸಂಸ್ಕಾರ ಮಾಡಿಸಿದ್ದರು ಎನ್ನಲಾಗಿದೆ. ಈ ಕುರಿತು ಮಣಿಪಾಲ ಶವಾಗಾರದ ಮುಂದೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶವ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕುಟುಂಬಸ್ಥರು, ಮೃತದೇಹ ಕಾಣೆಯಾಗಿದೆ ಎಂದು ದೂರು ನೀಡಲು ಮುಂದಾಗಿದ್ದಾರೆ.
ಜಿಲ್ಲಾಡಳಿತ ಸ್ಪಷ್ಟನೆ: ಕೋವಿಡ್ ಸೋಂಕಿತ ವ್ಯಕ್ತಿ ಮೃತದೇಹ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಬಾಲಕೃಷ್ಣ ಶೆಟ್ಟಿ ಅವರ ಮಾವ ಮಣಿಪಾಲ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ್ ಹೆಗ್ಡೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಡಾ. ಪದ್ಮರಾಜ್ ಅವರ ಸೂಚನೆಯಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ. ಸ್ವಯಂ ಸೇವಕರ ಮೂಲಕ ಅಂತ್ಯ ಸಂಸ್ಕಾರ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಅಂತ್ಯ ಸಂಸ್ಕಾರದ ನಂತ್ರ ಶವ ಪಡೆಯಲು ಬಾಲಕೃಷ್ಣ ಶೆಟ್ಟರ ಸಹೋದರನ ಪುತ್ರ ಮತ್ತು ಕುಟುಂಬಸ್ಥರು ಬಂದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದವರ ಸೂಚನೆಯಂತೆ ಅಂತ್ಯಕ್ರಿಯೆ ನಡೆಸಿದ್ದೇವೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.