ಉಡುಪಿ: ಕಿಶನ್ ಹೆಗಡೆ ಕೊಲೆ ಪ್ರಕರಣದ 5 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಮನೋಜ್ ಕುಲಾಲ್ (37), ಚಿತ್ತರಂಜನ್ (27), ಚೇತನ್ (32), ರಮೇಶ್ (38) ಹಾಗೂ ದೀಕ್ಷಿತ್ (29) ಬಂಧಿತ ಆರೋಪಿಗಳು. ಈ ಕುರಿತು ಪ್ರತಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ವಿಷ್ಣುವರ್ಧನ್, ಕಾರ್ಕಳದ ಎಸ್.ಕೆ.ಬಾರ್ಡರ್ ಬಳಿ ಕಿಶನ್ ಹೆಗಡೆ ಕೊಲೆ ಪ್ರಕರಣದ 5 ಆರೋಪಿಗಳನ್ನು ಬಂಧಿಸಲಾಗಿದೆ.
ಕಿಶನ್ ಹೆಗಡೆಯನ್ನು ಮಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದಿದ್ದ ಹಂತಕರು, ಹಿರಿಯಡ್ಕ ಬಳಿ ಅಡ್ಡಕಟ್ಟಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾರೆ. ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯವೇ ಕೊಲೆಗೆ ಪ್ರಮುಖ ಕಾರಣ. ಪ್ರಮುಖ ಆರೋಪಿ ಮನೋಜ್ ಮೇಲೆ ಈಗಾಗಲೇ 17 ಕೇಸ್ಗಳಿವೆ. ಚೇತನ್ ಮತ್ತು ಚಿತ್ತರಂಜನ್ ಮೇಲೂ ತಲಾ ಐದು ಪ್ರಕರಣಗಳಿವೆ ಎಂದರು.
ಇನ್ನು, ಘಟನೆ ನಡೆದ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.