ಉಡುಪಿ: ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರು, ಭಿಕ್ಷುಕರು ಮತ್ತು ಮಾನಸಿಕ ಅಸ್ವಸ್ಥರ ಪಾಡು ಹೇಳತೀರದು. ನಗರದ ಬಸ್ ನಿಲ್ದಾಣ, ಮಾರುಕಟ್ಟೆ ಮತ್ತು ಅಂಗಡಿ ಮುಂಗಟ್ಟುಗಳ ಜಗುಲಿಗಳಲ್ಲಿ ಬಿದ್ದುಕೊಂಡಿದ್ದ ಇವರುಗಳಿಗೆ ನಿನ್ನೆ ಜಿಲ್ಲಾಡಳಿತ ನಗರದ ಬೋರ್ಡ್ ಹೈಸ್ಕೂಲ್ನಲ್ಲಿ ಆಶ್ರಯ ಕಲ್ಪಿಸಿದೆ.
ಇಂತಹ ನಿರ್ಗತಿಕರು, ಭಿಕ್ಷುಕರು ಮತ್ತು ಮಾನಸಿಕ ಅಸ್ವಸ್ಥರಿಗೆ ಆಶ್ರಯ ಸಿಕ್ಕಿದರೂ ಇವರೆಲ್ಲ ತಮ್ಮ ವೈಯಕ್ತಿಕ ಶುಚಿತ್ವದೆಡೆಗೆ ಅಷ್ಟಾಗಿ ಗಮನ ನೀಡುತ್ತಿಲ್ಲ. ಇದನ್ನು ಮನಗಂಡ ಹೋಪ್ ಇಂಡಿಯಾ ಫೌಂಡೇಶನ್, ನಿರ್ಗತಿಕರ ಸಹಾಯಕ್ಕೆ ಧಾವಿಸಿದೆ.
ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಇರುವ ಸುಮಾರು 50 ನಿರ್ಗತಿಕರಿಗೆ ಕಟಿಂಗ್, ಶೇವಿಂಗ್ ಸೇರಿದಂತೆ ಕೈ ಹಾಗೂ ಕಾಲಿನ ಉಗುರು ತೆಗೆಯುವ ಮೂಲಕ ಮಾನವೀಯತೆ ಮೆರೆದಿದೆ.
ಹೋಪ್ ಇಂಡಿಯಾ ಫೌಂಡೇಶನ್ ಸದಸ್ಯರಾದ ಮಂಜು, ಶಾಹಿಲ್ ರಹಮತುಲ್ಲಾ, ಸಮಾಜ ಸೇವಕ ಅನ್ಸಾರ್ ಅಹಮದ್ ಈ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದರು.