ಉಡುಪಿ: ಆರ್ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಸಂಸದೆ, ಶಿರಾ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯವಿದೆ. ಹೀಗಾಗಿ ಅಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಆರ್ಆರ್ ನಗರದಲ್ಲಿ ಕುಸುಮಾ ಸ್ಪರ್ಧಿಸುತ್ತಿದ್ದಾರೆ. ಡಿ.ಕೆ ರವಿಯವರ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ. ಅವರು ಬದುಕಿದ್ದಾಗ ಕುಸುಮಾ ಕುಟುಂಬ ಏನು ಮಾಡಿತ್ತು? ಅವರ ಮಾವ ಏನು ಮಾಡಿದ್ರು? ಅವರು ಸತ್ತ ತಕ್ಷಣ ಕುಸುಮಾ ಎಲ್ಲಿಗೆ ಹೋದರು? ಯಾಕೆ ಹೋದರು? ಇದೆಲ್ಲವೂ ಚರ್ಚೆಯಾಗುತ್ತದೆ ಇದಕ್ಕಾಗಿ ಅವರು ರವಿ ಹೆಸರು ಪ್ರಸ್ತಾಪಿಸದೆ ಇರೋದು ಒಳ್ಳೆಯದು ಎಂದರು.
ರವಿ ಹಾಗೂ ಅವರ ಪತ್ನಿಯ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ. ರವಿಯವರ ಸಾವು ಅವರ ತಂದೆ ತಾಯಿಗಾದ ಅವಮಾನ. ಅವರ ಕೆಟ್ಟ ಪರಿಸ್ಥಿತಿ ಚರ್ಚೆಯ ವಿಷಯವಾಗಿದೆ. ಚುನಾವಣಾ ವಿಷಯದಲ್ಲಿ ಇದೆಲ್ಲಾ ಪ್ರಸ್ತಾಪ ಆಗೋದು ಒಳ್ಳೆಯದಲ್ಲ. ಒಂದು ವೇಳೆ ಕುಸುಮಾ ಚರ್ಚೆಗೆ ತೆಗೆದರೆ ನಮ್ಮಲ್ಲೂ ಸಾಕಷ್ಟು ವಿಚಾರಗಳಿವೆ ಎಂದು ಶೋಭಾ ಕೆರಂದ್ಲಾಜೆ ಎಚ್ಚರಿಕೆ ನೀಡಿದರು.
ಉತ್ತರಪ್ರದೇಶ ಘಟನೆ ಒಂದು ವ್ಯವಸ್ಥಿತ ಷಡ್ಯಂತ್ರ
ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಸರಕಾರಕ್ಕೆ ಮುಜುಗರ ಮಾಡುವ ಷಡ್ಯಂತ್ರ. ಇದರ ಹಿಂದೆ ಪಿಎಫ್ಐ ಮತ್ತು ಎಸ್ಡಿಪಿಐ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಾನು ಹೇಳುವುದಿಲ್ಲ. ಈ ಎರಡು ಸಂಘಟನೆಗಳು ವ್ಯವಸ್ಥಿತ ಜಾಲ ಹೆಣೆದಿವೆ. ಈ ಬಗ್ಗೆ ಸಮಗ್ರವಾದ ತನಿಖೆಯಾಗಲಿ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ.
ಪ್ರಕರಣದಲ್ಲಿ ಎಸ್ಡಿಪಿಐ ಕುಮ್ಮಕ್ಕು ಇದೆ ಅಂತಾದರೆ ಎನ್ಐಎ ಯಿಂದ ತನಿಖೆಯಾಗಬೇಕು. ಎರಡು ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಭವಿಷ್ಯದ ದಿನಗಳಲ್ಲಿ ಈ ಸಂಘಟನೆಗಳು ನಿಷೇಧ ಆಗುತ್ತೆ ಎಂದು ಹೇಳಿದರು.