ತುಮಕೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬಿದ್ದು, ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಈ ಮೈತ್ರಿ ಮುಂದುವರಿದಿದ್ದು, ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ, ಈ ಎರಡೂ ಪಕ್ಷಗಳು ಮೈತ್ರಿ ಮುಂದುವರಿಸುವುದರೊಂದಿಗೆ ಯಶಸ್ವಿಯಾಗಿದೆ.
ಇಂದು ನಡೆದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದ ಫರಿದಾ ಬೇಗಂ ಮೇಯರ್ ಆಗಿ ಮತ್ತು ಉಪ ಮೇಯರ್ ಆಗಿ ಜೆಡಿಎಸ್ ಪಕ್ಷದ ಶಶಿಕಲಾ ಗಂಗಹನುಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ 35 ಪಾಲಿಕೆ ಸದಸ್ಯರ ಪೈಕಿ 12 ಮಂದಿ ಬಿಜೆಪಿ ಸದಸ್ಯರು, ತಲಾ ಹತ್ತು ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿದ್ದು ಮೂವರು ಪಕ್ಷೇತರರಿದ್ದಾರೆ.
ಯಾವುದೇ ಪಕ್ಷಕ್ಕೂ ಅಧಿಕಾರದ ಗದ್ದುಗೆ ಏರಲು ಸ್ಪಷ್ಟ ಬಹುಮತವಿಲ್ಲ. ಹೀಗಾಗಿ ಎರಡನೇ ಅವಧಿಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮುಂದುವರಿಸಿಕೊಂಡು ಹೋಗಿದ್ದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿವೆ. ಇಂದು ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ 13ನೇ ವಾರ್ಡಿನ ಫರಿದಾ ಬೇಗಂ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದೇ ರೀತಿ ಜೆಡಿಎಸ್ನಿಂದ ಉಪಮೇಯರ್ ಸ್ಥಾನಕ್ಕೆ ಶಶಿಕಲಾ ಗಂಗಹನುಮಯ್ಯ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ಬಿಜೆಪಿ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಉಮೇದುವಾರಿಕೆಯನ್ನು ಸಲ್ಲಿಸಿದ್ದ ವೀಣಾ ಮನೋಹರ್ ಗೌಡ, ಕೊನೆ ಹಂತದಲ್ಲಿ ತಮ್ಮ ನಾಮಪತ್ರವನ್ನು ಹಿಂಪಡೆದರು. ಹೀಗಾಗಿ ಕಾಂಗ್ರೆಸ್ನ ಫರಿದಾ ಬೇಗಂ ಅವಿರೋಧವಾಗಿ ಆಯ್ಕೆಯಾದರು. ಇನ್ನು ಉಪಮೇಯರ್ ಸ್ಥಾನಕ್ಕೂ ಕೂಡ ಜೆಡಿಎಸ್ನ ಶಶಿಕಲಾ ಗಂಗಹನುಮಯ್ಯ ಹೊರತುಪಡಿಸಿ, ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಶಶಿಕಲಾ ಅವರನ್ನು ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಎನ್. ವಿ. ಪ್ರಸಾದ್ ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಸದ ಜಿ. ಎಸ್. ಬಸವರಾಜ್ , ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಮತದಾನದ ಹಕ್ಕನ್ನು ಹೊಂದಿದ್ದರು. ತುಮಕೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು, 18 ಸದಸ್ಯರ ಬೆಂಬಲದ ಅಗತ್ಯವಿತ್ತು. ಜೆಡಿಎಸ್ನ 10ಮಂದಿ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಹತ್ತು ಮಂದಿ ಸದಸ್ಯರು ಸೇರಿದಂತೆ ಒಬ್ಬ ಪಕ್ಷೇತರ ಸದಸ್ಯ ಕೂಡ ಈ ಮೈತ್ರಿ ಪಕ್ಷಗಳಿಗೆ ಬೆಂಬಲ ನೀಡಿದ್ದಾರೆ.
ಅಲ್ಲದೇ, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಕೂಡ ಮತದಾನದ ಹಕ್ಕು ಹೊಂದಿರುವುದರಿಂದ, ಮೈತ್ರಿಯ ಬಲಾಬಲ 22 ಆಗಲಿದೆ. ಹೀಗಾಗಿ ಸುಲಭವಾಗಿ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರವನ್ನು ಎರಡು ಪಕ್ಷಗಳು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಪಾಲಿಕೆಯಲ್ಲಿ ಬಿಜೆಪಿ 12ಸದಸ್ಯ ಬಲವನ್ನು ಹೊಂದಿದ್ದು, ಓರ್ವ ಪಕ್ಷೇತರ ಸದಸ್ಯರ ಬೆಂಬಲ ಹೊಂದಿದೆ. ಅಲ್ಲದೆ ಬಿಜೆಪಿ ಸಂಸದರು ಹಾಗೂ ಬಿಜೆಪಿ ನಗರ ಶಾಸಕರು ಮತದಾನದ ಹಕ್ಕು ಹೊಂದಿದ್ದರೂ, ಕೇವಲ 15 ಸದಸ್ಯ ಬಲ ಮಾತ್ರ ಅವರ ತೆಕ್ಕೆಯಲ್ಲಿದೆ. ಹೀಗಾಗಿ ಬಿಜೆಪಿ ಪಕ್ಷವು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ತನ್ನ ಯಾವುದೇ ಸದಸ್ಯರನ್ನು ಕಣಕ್ಕಿಳಿಸಲಿಲ್ಲ.ಇಂದು ನಡೆದ ಚುನಾವಣೆ ಸಂದರ್ಭದಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೂ ಕೂಡ ಆಯ್ಕೆ ಪ್ರಕ್ರಿಯೆ ನಡೆಯಿತು.