ತುಮಕೂರು: ಹೈಕೋರ್ಟ್ ಆದೇಶದಂತೆ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಾರ್ಮಿಕ ಅಧಿಕಾರಿಗಳ ನೇಮಕ ಹಾಗೂ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿ ಐಟಿಯು ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ತೀರ್ಪಿನಂತೆ 35 ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನದ ಸಮೇತ ಉಳಿದ ಸೌಲಭ್ಯಗಳನ್ನು ನೀಡುವ ಆದೇಶವನ್ನು ಜಾರಿಗೊಳಿಸಲು ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.ಕಾರ್ಮಿಕ ಕೆಲಸ ಶೀಘ್ರ ಮಾಡುವ ಉದ್ದೇಶದಿಂದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ತಿಳಿಸಿದರು. ಈ ಸಂಬಂಧ ಕಾರ್ಮಿಕರು ಈಗಾಗಲೇ ಕೋರ್ಟಿಗೆ ವರ್ಷಗಟ್ಟಲೆ ಅಲೆದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಹಮಾಲಿಗಳು, ಟೈಲರ್ ಗಳು, ಮೆಕಾನಿಕಲ್ ಮತ್ತಿತರರಿಗೆ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ಸ್ಮಾರ್ಟ್ ಕಾರ್ಡ್ ನೀಡಲು ಅರ್ಜಿ ಪಡೆದು ವರ್ಷ ಕಳೆದರೂ ಇನ್ನೂ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲ. ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನವರಿದ್ದು, ಬೀಡಿ ಕಾರ್ಮಿಕರಿಗೆ ಸರ್ಕಾರಿ ಅಧಿಸೂಚಿತ ಕನಿಷ್ಠ ವೇತನ ಹಾಗೂ ಬಾಕಿ ಇರುವ ತುಟಿ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು
ಹತ್ತು ರೂಪಾಯಿಂದ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು 1,000 ಕ್ಕೆ ಏರಿಸಿರುವ ಸರ್ಕಾರದ ಕ್ರಮ ವಾಪಸ್ ಪಡೆಯಬೇಕು. ಕಾರ್ಮಿಕರಿಗೆ ವೇತನ ನೀಡದೆ ಬೋನಸ್ ಗ್ರಾಚುಟಿ ನೀಡದೇ ವಂಚಿಸುತ್ತಿರುವ ಸ್ಕಾರ್ಟ್ ಗಾರ್ಮೆಂಟ್ಸ್ ಆಡಳಿತ ಮಂಡಳಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.