ತುಮಕೂರು: ಜಿಲ್ಲೆಯ ಬಯಲುಸೀಮೆಯ ಕೆಲ ತಾಲೂಕುಗಳ ಜೀವನದಿ ಎಂದೇ ಕರೆಸಿಕೊಂಡಿರುವ 'ಜಯಮಂಗಲಿ ನದಿ' ಇಂದು ಮಾನವನ ದುರಾಸೆಗೆ ಬಲಿಯಾಗುತ್ತಿದೆ. ಮಿತಿಮೀರಿದ ಮಾನವನ ಆಸೆಯಿಂದ ನದಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಹರಿಯುವ ಜಯಮಂಗಲಿ ನದಿಯ ಪಥಕ್ಕೆ ಕಡಿವಾಣ ಹಾಕುವ ಮೂಲಕ ಅದರ ಅಸ್ತಿತ್ವಕ್ಕೆ ಕುತ್ತು ತರಲಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರುಣಿಸಬೇಕಾಗಿದ್ದ ಈ ನದಿ ಸೀಮಿತ ಪ್ರದೇಶಕ್ಕೆ ಮಾತ್ರ ಎಂಬಂತೆ ಆಗಿದೆ. ಕೃಷ್ಣಾ ನದಿ ಪಾತ್ರ ಮತ್ತು ಆಂಧ್ರದ ಪಾಲಾರ್ ನದಿ ಪಾತ್ರಕ್ಕೆ ಸೇರುವ ಈ ಜಯಮಂಗಲಿ ನದಿಯಲ್ಲಿ ಇದೀಗ ನೀರಿಲ್ಲದೇ ಒಂದು ರೀತಿ ಸೀಮಿತ ಮರಳುಗಾಡು ಎಂಬಂತೆ ಭಾಸವಾಗುತ್ತಿದೆ.
ಮಳೆಯಾದ ಸಂದರ್ಭದಲ್ಲಿ ಜಯಮಂಗಲಿ ನದಿಯಲ್ಲಿ ಹರಿಯುವ ನೀರು ಮುಂದೆ ಸಾಗಿದಂತೆ ನದಿ ಪಾತ್ರದಲ್ಲಿ ಇರುವ ಕೆರೆ-ಕಟ್ಟೆಗಳಿಗೆ ನದಿ ನೀರನ್ನು ತಿರುಗಿಸಿಕೊಳ್ಳುವ ದುಸ್ಸಾಹಸಕ್ಕೆ ಜನರು ಮುಂದಾಗಿದ್ದಾರೆ. ಇದರಿಂದಾಗಿ ನದಿಯ ಕೊನೆ ಭಾಗದ ರೈತರಿಗೆ ನೀರು ಲಭಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಮಧುಗಿರಿ ತಾಲೂಕಿನ ಕೆಲ ಗ್ರಾಮಗಳ ಜನ ನದಿಯ ಪಥ ಬದಲಿಸುತ್ತಿದ್ದು ಜಯಮಂಗಲಿ ಅಸ್ತಿತ್ವವೇ ಇಲ್ಲವಾಗುತ್ತೇನೋ ಎಂಬ ಆತಂಕ ಕಾಡುತ್ತಿದೆ. ಇದೇ ನೀರನ್ನೇ ಅವಲಂಬಿಸಿರುವ ನದಿ ಭಾಗದ ಮುಂದಿನ ರೈತರು ತೀವ್ರ ತೊಳಲಾಟದ ಸ್ಥಿತಿ ಅನುಭವಿಸುತ್ತಿದ್ದಾರೆ.
ನೂರಾರು ಕಿ.ಮೀ ವರೆಗೂ ವ್ಯಾಪಿಸಿಕೊಂಡಿರುವ ಈ ನದಿ ಇದೀಗ ಕೇವಲ 40ರಿಂದ 50 ಕಿ.ಮೀ ವರೆಗೆ ಅಷ್ಟೇ ನೀರು ತೆಗೆದುಕೊಂಡು ಹೋಗುವ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಕೊರಟಗೆರೆ ಹಾಗೂ ಮಧುಗಿರಿ ತಾಲೂಕಿನ ಮೂಲಕ ಹರಿದು ಹೋಗುವ ಜಯಮಂಗಲಿ ನದಿಯನ್ನು ಅಲ್ಲಲ್ಲಿ ರೈತರು ಇದರ ಹರಿಯುವಿಕೆಗೆ ಕಡಿವಾಣ ಹಾಕುತ್ತಿರುವುದು ದುರಂತವೇ ಎನ್ನಲಾಗುತ್ತಿದೆ.