ಕೊಳ್ಳೇಗಾಲ : ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಲು ಬಂದಿದ್ದರು.
ಈ ವೇಳೆ ಮಾರ್ಗಮಧ್ಯೆ ಕೊಳ್ಳೇಗಾಲದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದು, ಡಿಕೆಶಿ ಅವರನ್ನ ಸ್ವಾಗತಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಕೋವಿಡ್ ನಿಯಮ ಉಲಂಘಿಸಿದ್ದಾರೆ.
ಕೊಳ್ಳೇಗಾಲ ಪ್ರವಾಸಿ ಮಂದಿರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವ ಕುಮಾರ್ ಬರುತ್ತಿದಂತೆ ಇಲ್ಲಿನ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿ ಅವರನ್ನು ಸ್ವಾಗತಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ನೂಕಾಟದಲ್ಲೇ ಹಾರ, ಶಾಲುಗಳನ್ನು ಹಾಕಿ ಬರಮಾಡಿಕೊಂಡರು. ಈ ನಡುವೆ ಸಾಮಾಜಿಕ ಅಂತರವೇ ಮರೆಯಾಗಿತ್ತು.
ಈ ವೇಳೆ ಡಿಕೆಶಿ ಅವರು ದೂರ ದೂರ ನಿಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ರೂ ಗಮನಕ್ಕೆ ಹಾಕಿಕೊಳ್ಳದ ಸ್ಥಳೀಯ ಕೈ ನಾಯಕರು, ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ನಂತರ, ಜಿಲ್ಲಾ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ದುರಂತದ ಬಗ್ಗೆ ಸ್ಥಳೀಯ ನಾಯಕರಿಂದ ಡಿಕೆಶಿ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಆದಂತಹ ದೊಡ್ಡ ದುರಂತದಿಂದ ಸರ್ಕಾರದ ಕೊಲೆಯಾಗಿದೆ. ಈ ನೋವಿನ ಬಗ್ಗೆ ವಿಚಾರಿಸಲು, ನೊಂದಂತಹ ಜನರನ್ನು ಮಾತನಾಡಿಸಲು ನಾನು ಮತ್ತು ನಮ್ಮ ವಿರೋಧ ಪಕ್ಷದ ನಾಯಕರು ಆಗಮಿಸಿದ್ದೇವೆ. ಈಗಾಗಲೇ ನಮ್ಮ ಹಾಲಿ ಮತ್ತು ಮಾಜಿ ಶಾಸಕರಿಂದ ಮಾಹಿತಿ ಪಡೆದಿದ್ದೇವೆ. ಆಸ್ಪತ್ರೆ ಭೇಟಿ ನೀಡಿದ ಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.