ಶಿವಮೊಗ್ಗ: ಸಂಘಟನೆಯೊಂದರ ಕಾರ್ಯಕರ್ತನ ಮೇಲೆ ಯುವಕನೊಬ್ಬ ಮಚ್ಚು ಬೀಸಿದ್ದಾನೆ ಎಂದು ಆರೋಪಿಸಲಾದ ಘಟನೆ ಸಾಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸಾಗರ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಘಟನೆಯೊಂದರ ಕಾರ್ಯಕರ್ತ ಸುನೀಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಸುನೀಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಖಂಡಿಸಿ ನಾಳೆ(ಮಂಗಳವಾರ) ಸಾಗರ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ.
ಘಟನೆಯ ವಿವರ : ಸಾಗರದ ಹೊಸ ಬಸ್ ನಿಲ್ದಾಣದ ಬಳಿಯಿರುವ ಕಚೇರಿಗೆ ಸುನೀಲ್ ಬೈಕ್ ಮೂಲಕ ತೆರಳುತ್ತಿದ್ದರು. ಈ ವೇಳೆ, ಅಲ್ಲಿಯೇ ಇದ್ದ ಯುವಕ ತನ್ನ ಬಳಿ ಕರೆದಿದ್ದಾನೆ. ಆತನ ಸಮೀಪ ಹೋಗುತ್ತಿದ್ದಂತೆ ತನ್ನ ಬೈಕ್ನಲ್ಲಿದ್ದ ಮಚ್ಚು ತೆಗೆದು ಬೀಸಿದ್ದಾನೆ. ಸುನೀಲ್ ಆತನಿಂದ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಹೇಳಲಾಗಿದೆ. ಸುನೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 'ನಾನು ಎಂದಿನಂತೆ ಆಫೀಸ್ಗೆ ತೆರಳುತ್ತಿದ್ದೆ. ಈ ವೇಳೆ, ಬೇರೆ ಸಮುದಾಯದ ಯುವಕ ನನ್ನನ್ನು ಅವಾಚ್ಯ ಶಬ್ದಗಳಿಂದ ಕರೆದಿದ್ದಾನೆ. ನಾನು ಆತನ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ಮಚ್ಚಿನಿಂದ ದಾಳಿ ಮಾಡಲು ಮುಂದಾದ' ಎಂದು ತಿಳಿಸಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ: ಸುನೀಲ್ ಮೇಲೆ ದಾಳಿ ನಡೆಯುತ್ತಿದ್ದಂತೆಯೇ ಸಾಗರದ ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳು ಸಾಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಸಾಗರ ಟೌನ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು. ಅಲ್ಲದೆ, ಘಟನೆ ಖಂಡಿಸಿ ನಾಳೆ ಸಾಗರ ಬಂದ್ಗೆ ಸಂಘಟನೆಗಳಿಂದ ಕರೆ ನೀಡಲಾಗಿದೆ.
ತನಿಖೆಗೆ ಮೂರು ತಂಡ ರಚನೆ ಎಂದ ಎಸ್ಪಿ: "ಬಜರಂಗದಳದ ಸಾಗರ ನಗರ ಸಹ ಸಂಚಾಲಕ ಸುನೀಲ್ ಮೇಲೆ ಮಚ್ಚು ಬೀಸಿದ ಆರೋಪಿ ಸಮೀರ್ ಎಂಬಾತನ ಬಂಧನಕ್ಕೆ ಮೂರು ತಂಡ ರಚನೆ ಮಾಡಲಾಗಿದೆ" ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. "ಸುನೀಲ್ ಕುಮಾರ್ ಬಿ.ಹೆಚ್.ರಸ್ತೆಯ ಆಭರಣ ಜ್ಯುವೆಲ್ಸ್ ಬಳಿ ಬೈಕ್ನಲ್ಲಿ ಬರುವಾಗ ಸಮೀರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆರೋಪಿಯು ತನ್ನ ಬೈಕ್ನಲ್ಲಿದ್ದ ಆಯುಧವನ್ನು ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾನೆ. ಈ ಸಂಬಂಧ ಮೂರು ಪೊಲೀಸ್ ತಂಡವನ್ನು ರಚನೆ ಮಾಡಲಾಗಿದೆ. ಘಟನೆ ಬಗ್ಗೆ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನವಾಗದ ಹೊರತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ, ತನಿಖೆ ಮುಂದುವರೆದಿದೆ" ಎಂದು ಎಸ್ಪಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಿನ್ನೆ ಎರಡು ದಾಳಿ ಪ್ರಕರಣ: ಜಿಲ್ಲೆಯಲ್ಲಿ ನಿನ್ನೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಮೇಲೆ ಬೇರೆ ಸಮುದಾಯದ ಯುವಕರು ಹಲ್ಲೆ ನಡೆಸಿದ್ದರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ಮಾರುಕಟ್ಟೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಯುವಕರಿಗೆ ಬುದ್ಧಿ ಹೇಳಿದ್ದಕ್ಕೆ ಮಂಜುನಾಥ್ (28) ಹಾಗೂ ಸುರೇಶ್ (38) ಎಂಬುವರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿತ್ತು. ನಮಗೆ ಬುದ್ಧಿ ಹೇಳ್ತಿಯಾ ಎಂದು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರ ಬಳಿಯಿದ್ದ ತೂಕದ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಸ್ಥಳೀಯರ ಸಹಾಯದಿಂದ ಹಲ್ಲೆ ನಡೆಸಿದ ಓರ್ವನನ್ನು ಗಾಯಗೊಂಡವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಸುರೇಶ್ ಹಾಗೂ ಮಂಜುನಾಥ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣ: ತುಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಅಪ್ರಾಪ್ತನ ಮೇಲೆ ಬೇರೆ ಸಮುದಾಯದ ಯುವಕರು ಹಲ್ಲೆ ನಡೆಸಿದ್ದರು. ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈತ ಕೆಲಸ ಮುಗಿಸಿಕೊಂಡು ನದಿಯಲ್ಲಿ ಸ್ನಾನಕ್ಕೆ ಹೋದಾಗ ನಮ್ಮ ಜಾಗಕ್ಕೆ ಬಂದು ಹಾರಾಡುತ್ತಿಯಾ ಎಂದು ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ - ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ