ಶಿವಮೊಗ್ಗ: ಚಿಕನ್ ಅಂಗಡಿ ಪರವಾನಗಿಗಾಗಿ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಜೋಗ - ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಾಗರ ತಾಲೂಕು ಜೋಗದ ನಿವಾಸಿ ಹರೀಶ್ ಗೌಡ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದವರು.
ಹರೀಶ್ ಗೌಡ ಪಟ್ಟಣ ಪಂಚಾಯಿತಿಯ 8 ವಾರ್ಡ್ ನ ಸದಸ್ಯರಾಗಿದ್ದಾರೆ. ಹರೀಶ್ ಗೌಡ ಅವರು ತಮ್ಮ ವಾರ್ಡ್ ನಲ್ಲಿ ಅನುಮತಿ ಪಡೆಯದೇ ಚಿಕನ್ ಅಂಗಡಿ ನಡೆಸುತ್ತಿದ್ದವರಿಂದ ಪರವಾನಗಿ ಮಾಡಿಸಿ ಕೊಡುವುದಾಗಿ ಹೇಳಿ 50 ಸಾವಿರ ರೂ ಬೇಡಿಕೆ ಇಟ್ಟು ಮೊದಲು 30 ಸಾವಿರ ರೂ. ಪಡೆದು, ಇಂದು 20 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.
ನೋಟು ಸುಡಲು ಯತ್ನಿಸಿದ ಹರೀಶ್ ಗೌಡ: ಲಂಚ ಪಡೆದ ಮೇಲೆ ಅದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂಕು ಇರುವುದನ್ನು ಕಂಡ ಹರೀಶ್ ಗೌಡ ನೋಟುಗಳನ್ನು ಸುಡುಲು ಯತ್ನಿಸಿದ್ದರಂತೆ. ಈ ವೇಳೆ, ಅಧಿಕಾರಿಗಳು ಅದನ್ನು ನಂದಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆಯಾದ ಮೇಲೆ ಜನಪ್ರತಿನಿಧಿ ಮೇಲೆ ಇದು ಪ್ರಥಮ ದಾಳಿಯಾಗಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್.. ಶಾರಿಕ್ನೊಂದಿಗೆ ಸಂಪರ್ಕದಲ್ಲಿದ್ದ ಮಹಮದ್ ರುಹುಲ್ಲಾ ವಶಕ್ಕೆ