ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ. ಯತೀಂದ್ರ ಅವರು ವರ್ಗಾವಣೆಗೆ ಹಣ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ (ಬಿಜೆಪಿ) ಸರ್ಕಾರ ಇದ್ದಾಗ ಶೇ. 40 ರಷ್ಟು ಕಮಿಷನ್ ಹಣ ಪಡೆಯುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೂಲಕ ಆರೋಪ ಮಾಡಿಸಿದ್ದಿರಿ. ಈಗ ನಿಮ್ಮದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈಗ ನೀವೇ ಹಾಲಿ ಅಥವಾ ನಿವೃತ್ತ ನಾಯ್ಯಾಧೀಶರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ, ಈ ಸಮಿತಿಯ ಮುಂದೆ ನಿಮಗೆ ಹಣ ನೀಡಿ ವರ್ಗಾವಣೆ ಮಾಡಿಸಿಕೊಂಡವರನ್ನು ತನಿಖಾ ಸಮಿತಿಯಿಂದ ಕರೆ ತಂದು ಹೇಳಿಸುತ್ತೇನೆ ಎಂದರು. ನನಗೆ ಹಣ ನೀಡಿದವರು ವಾಟ್ಸಪ್ನಲ್ಲಿ ಫೋನ್ ಮಾಡಿ, ಹಣ ನೀಡಿದ ಬಗ್ಗೆ ನನ್ನ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಚುನಾವಣೆಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದಾರೆ : ಸಿಎಂ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕುಕ್ಕರ್ ಹಾಗೂ ಐರನ್ ಬಾಕ್ಸ್ ನೀಡಿದ್ದೇವೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಹೇಳಿದ್ದಾರೆ. ಇದರಿಂದ ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಮಡಿವಾಳರ ಸಂಘದ ಕಾರ್ಯಕ್ರಮದಲ್ಲಿ ಡಾ. ಯತೀಂದ್ರ ಅವರು ಮಾತನಾಡಿದ್ದಾರೆ. ಇದರಿಂದ ಇವರಿಬ್ಬರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನೀರು ಹರಿಸಲ್ಲ ಎಂದು ನೀರು ಹರಿಸುವ ಡಿ. ಕೆ ಶಿವಕುಮಾರ್ : ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಡಿ. ಕೆ ಶಿವಕುಮಾರ್ ರೈತರಿಗೆ ದ್ರೋಹ ಮಾಡಿದ್ದಾರೆ. ಇವರು ನೀರು ಬಿಡಲ್ಲ ಎನ್ನುತ್ತಾರೆ. ಆದರೆ ರಾತ್ರೋರಾತ್ರಿ ನೀರು ಬಿಡುತ್ತಾರೆ. ಕಾವೇರಿ ನೀರು ಪ್ರಾಧಿಕಾರದ ಮುಂದೆ ಹೋಗಿ ತಮ್ಮ ವಾದವನ್ನು ರಾಜ್ಯ ಸರ್ಕಾರ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪವನ್ನು ಮಾಡಿದರು.
ಮೂರು ಡಿಸಿಎಂ ವಿಚಾರ : ಮೂವರು ಡಿಸಿಎಂಗಳನ್ನು ನೇಮಕ ಮಾಡಬೇಕೆಂಬ ಕೂಗು ರಾಜ್ಯ ಸರ್ಕಾರದಲ್ಲಿ ಕೇಳಿ ಬಂದಿದೆ. ಸಿದ್ದರಾಮಯ್ಯನ ಬೆಂಬಲಿಗರು ಮೂರು ಡಿಸಿಎಂ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಡಿ. ಕೆ ಶಿವಕುಮಾರ್ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ನ ನೂರು ದಿನದ ಸಾಧನೆ. ಇವರಲ್ಲಿ ಹೊಂದಾಣಿಕೆ ಇಲ್ಲ ಎಂದು ಈಶ್ವರಪ್ಪ ಹೇಳಿದ್ರು.
ನಗರದ ಹೊರ ವಲಯ ಆಶ್ರಯ ಮನೆಗಳ ವಿಚಾರ: ಆಶ್ರಯ ಮನೆಗಳಿಗೆ ತಮ್ಮ ತಾಳಿ ಮಾರಾಟ ಮಾಡಿ ಹಣ ನೀಡಿದ್ದಾರೆ. ಆದರೆ ಆಶ್ರಯ ಮನೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಗ್ಯಾರಂಟಿಗಾಗಿ ಉಳಿದ ಯೋಜನೆಗಳಿಗೆ ಬ್ರೇಕ್ ಹಾಕಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಸ್ಮಾರ್ಟ್ ಸಿಟಿ ತನಿಖೆಗೆ ಈಶ್ವರಪ್ಪ ಗರಂ: ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಹಾಗೂ ಲೂಟಿ ನಡೆಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ನಡೆಸುವ ಹೇಳಿಕೆಗೆ ಗರಂ ಆದ ಈಶ್ವರಪ್ಪ, ತಾಕತ್ ಇದ್ರೆ ಇದನ್ನು ಕೇಂದ್ರದ ಸಿಬಿಐಗೆ ನೀಡಲಿ ಎಂದು ಆಗ್ರಹಿಸಿದರು. ಅಧಿಕಾರಕ್ಕೆ ಬಂದಾಗಿನಿಂದ ತನಿಖೆ ತನಿಖೆ ಅಂತ ಹೆದರಿಸುವುದನ್ನು ಬಿಟ್ಟು ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. ತನಿಖೆ ಎಂದು ಹೇಳಿ ಗುತ್ತಿಗೆದಾರರು ತಮ್ಮ ಮನೆ ಬಾಗಿಲಿಗೆ ಬರಲಿ ಎಂದು ಸಚಿವರು ಹೀಗೆ ಹೇಳುತ್ತಿರಬೇಕು ಎಂದು ವ್ಯಂಗ್ಯವಾಡಿದರು.
ನನಗೆ ಕ್ಲೀನ್ ಚಿಟ್ ಸಿಕ್ಕಿದೆ : ನನ್ನ ವಿರುದ್ಧ ಆರೋಪ ಮಾಡಿದರು, ನಾನು ಕೋರ್ಟ್ಗೆ ಹೋಗಿದ್ದೆ. ಪೊಲೀಸ್ ಇಲಾಖೆಯಿಂದ ನನಗೆ ಕ್ಲೀನ್ ಚಿಟ್ ನೀಡಿದೆ. ಆದರೂ ಸಹ ಆರೋಪ ಮಾಡುತ್ತಿದ್ದಾರೆ ಎಂದು ಗರಂ ಆದರು.
ಬರಗಾಲ ನಿರ್ವಹಣೆಯಲ್ಲಿ ವಿಫಲ: ಭೀಕರ ಬರಗಾಲ ಹಿಂದೆಂದೂ ಸಹ ಬಂದಿರಲಿಲ್ಲ. ಕೇಂದ್ರದ ಜೊತೆ ಮಾತನಾಡಲು ಸರ್ವೇ ನಡೆಸಬೇಕಿತ್ತು. ಆದರೆ ಇನ್ನೂ ಸರ್ವೇ ನಡೆಸದೆ ಇರುವುದು ದುರಂತ. ಇನ್ನೂ ಸರ್ವೇ ಮಾಹಿತಿ ಪಡೆಯಲಾಗುವುದು ಎಂದು ಕಂದಾಯ ಸಚಿವರು ಹೇಳುತ್ತಿದ್ದಾರೆ. ಕೇಂದ್ರ ತನ್ನ ಮಾನದಂಡವನ್ನು ಬದಲಾಯಿಸಬೇಕೆಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಮೊದಲು ನೀವು ಎಲ್ಲಾ ಮಾಹಿತಿ ಸಂಗ್ರಹಿಸಿಕೊಳ್ಳಿ. ಎಲ್ಲರಿಗೂ ಪರಿಹಾರ ನೀಡಲು ಹಣ ಇದೆಯೇ ಎಂದು ಮೊದಲು ತಿಳಿದುಕೊಳ್ಳಿ ಎಂದು ಈಶ್ವರಪ್ಪ ಹೇಳಿದ್ರು.
ಕಾವೇರಿ ಕುರಿತು ದೆಹಲಿಯಲ್ಲಿ ಸಭೆ ನಡೆಸುತ್ತಿದ್ದಿರಿ. ಇದು ಒಳ್ಳೆಯ ಬೆಳವಣಿಗೆ. ನೀವು ಕೇಂದ್ರದ ಬಳಿ ಮಾತನಾಡಲು ಹೋದಾಗ ಅಂಕಿ ಅಂಶ ಇಲ್ಲದೆ ಹೋದರೆ ಮಾಹಿತಿ ಕೇಳಿದ್ರೆ ನಿಮಗೆ ನಾಚಿಕೆ ಆಗುತ್ತದೆ. ಲೋಕಸಭಾ ಚುನಾವಣೆ ದೂರವಿದೆ. ಇದರಿಂದ ರಾಜ್ಯಕ್ಕೆ ಬಂದು ಮಾಹಿತಿ ಸಂಗ್ರಹಿಸಿ ಎಂದರು. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು. ನಾವು ಸಹಾಯ ಮಾಡುತ್ತೇವೆ. ಇದರಿಂದ ಸಿಎಂ ಮೊದಲು ರಾಜ್ಯದ ಬರ ಕುರಿತು ವಾಸ್ತವ ಪರಿಸ್ಥಿತಿ ಮಾಹಿತಿ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕೆ ಎಸ್ ಈಶ್ವರಪ್ಪ ಗಂಭೀರ ಆರೋಪ