ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಯೋಜನೆ ಘೋಷಣೆಗೆ ಮಾತ್ರ ಸಿಮೀತವಾಗಿರದೆ ಕಾರ್ಯರೂಪಕ್ಕೂ ಬಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ನಿಂದ ಭಾರತಕ್ಕೆ ಚೇತರಿಕೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಯೋಜನೆ ಘೋಷಣೆ ಮಾಡಿದ್ದಾರೆ. ಇದರಲ್ಲಿ MSME(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ)ಗಳ ಅಭಿವೃದ್ಧಿಯಾಗಬೇಕು ಎಂದು 16 ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಮೋದಿಯವರು ಕರೆ ನೀಡಿರುವಂತೆ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು, ಅವುಗಳನ್ನು ಪ್ರಪಂಚದ ಬ್ರ್ಯಾಂಡ್ ಮಾಡಬೇಕಿದೆ ಎಂದರು. ಆತ್ಮ ನಿರ್ಭರ ಯೋಜನೆಯಲ್ಲಿ 20 ಲಕ್ಷ ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಗರೀಬ್ ಕಲ್ಯಾಣ್ ಯೋಜನೆಗೆ 1.70 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಆತ್ಮ ನಿರ್ಭರದಲ್ಲಿ ಘೋಷಣೆಯಾದ ಹಣವನ್ನು ಸರಿಯಾಗಿ ತಲುಪಿಸಲಾಗುತ್ತಿದೆ.
ಆತ್ಮ ನಿರ್ಭರ ಭಾರತದಲ್ಲಿ ಕಾರ್ಮಿಕ ಹಾಗೂ ವ್ಯಾಪಾರಿಗಳಿಗೆ ಇಪಿಎಫ್ ಬೆಂಬಲ ನೀಡಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಂತ ಹಂತವಾಗಿ ಸಾಲ ಖಾತರಿ ಯೋಜನೆ 2.0 ಜಾರಿಗೊಳಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮತ್ತು ಬಡವರಿಗಾಗಿ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯಲ್ಲಿ 8.70 ಕೋಟಿ ಫಲಾನುಭವಿಗಳಿದ್ದು, ಇವರಿಗೆ 17,890 ಕೋಟಿ ರೂ. ನೀಡಲಾಗಿದೆ ಎಂದರು.
ಮಹಿಳಾ ಜನ್ ಧನ್ ಖಾತೆಯಲ್ಲಿ 20 ಕೋಟಿ ಫಲಾನುಭವಿಗಳಿದ್ದು, ಇವರಿಗೆ 30,611 ಕೋಟಿ ರೂ. ನೀಡಲಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 3 ಕೋಟಿ ಫಲಾನುಭವಿಗಳಿಗೆ 3 ಕೋಟಿ ರೂ. ಸಾಲ ನೀಡಲಾಗಿದೆ. ಉಜ್ವಲ ಯೋಜನೆಯಡಿ 8.19 ಕೋಟಿ ಫಲಾನುಭವಿಗಳಿದ್ದು, 13 ಕೋಟಿ ರೂ. ನೀಡಲಾಗಿದೆ ಎಂದರು.