ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಸಾಹಿತಿಗಳಲ್ಲಿ ಒಬ್ಬರಾದ ನಾ ಡಿಸೋಜಾರಿಗೂ ಸಹ ಎರಡು ಬೆದರಿಕೆ ಪತ್ರಗಳು ಬಂದಿದ್ದವಂತೆ. ಇದನ್ನು ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ಭಾನುವಾರ ಸಾಗರದ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಶಾಖೆಯಿಂದ ಆಯೋಜಿಸಿದ್ದ ಸಮಾಲೋಚನ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗಿನ ಸನ್ನಿವೇಶದಲ್ಲಿ ನಿರ್ಭಯವಾಗಿ ನೋಡಿದ್ದನ್ನು ಬರೆಯುವ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ಸತ್ಯವನ್ನು ಬರೆಯುವವರಿಗೆ ಬೆದರಿಕೆ ಪತ್ರಗಳು ಬರುತ್ತಿವೆ. ನನಗೂ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಅವನ್ನು ಹಾಗೇ ಎತ್ತಿಟ್ಟಿದ್ದೇನೆ ಎಂದರು.
ನನ್ನ ಸ್ನೇಹಿತಯೊಬ್ಬರಿಗೆ ನಿಮ್ಮನ್ನು ತೆಗೆಯುತ್ತೇವೆ ಎಂಬ ಬೆದರಿಕೆ ಪತ್ರ ಬಂದಿದೆ. ಅವರ ಹಿಂದೆಯೇ ನನಗೂ ಎರಡು ಬೆದರಿಕೆ ಪತ್ರಗಳು ಬಂದಿವೆ. ಈಗಿನ ದಿನದಲ್ಲಿ ವಿಭಿನ್ನ ಸನ್ನಿವೇಶ ಸೃಷ್ಟಿಯಾಗಿದೆ. ಸಾಹಿತಿಗಳು ಅನ್ನಿಸಿದ್ದನ್ನು ಬರೆಯಲು ಕಡಿವಾಣ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಇಂದಿಗೂ ಸಾಹಿತ್ಯ ಒಳ್ಳೆಯವರ ಕೈಯಲ್ಲಿದೆ ಎನ್ನುವ ವಿಶ್ವಾಸವಿದೆ. ಸಾಹಿತಿಗಳ ಹಿಂದೆ ಜನ ಇರಬೇಕು. ಸಾಹಿತಿಗಳಿಗೆ ತೂಂದರೆಯಾಗಿದೆ ಅಂದ್ರೆ ಯಾರೂ ಬರಲ್ಲ ಎಂದು ನಾ. ಡಿಸೋಜಾ ಬೇಸರ ವ್ಯಕ್ತಪಡಿಸಿದರು.
ಲೇಖಕನೊಬ್ಬ ಸತ್ಯವನ್ನು ಬರೆಯುತ್ತಿದ್ದಾನೆ. ಅವನ ಸಾಹಿತ್ಯ ಬರವಣಿಗೆ ಸಮಾಜಕ್ಕೆ ಪೂರಕವಾಗಿದೆ ಎಂದು ಗೂತ್ತಾದಾಗ ಅವರ ಪರವಾಗಿ ನಿಲ್ಲುವ ವಾತಾವರಣ ಸೃಷ್ಟಿಯಾಗಬೇಕೆಂದರು. ಈ ವೇಳೆ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಓದಿ: ಪರಿಮಳ ಡಿಸೋಜಾ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಮೂವರು ಮಾಜಿ ಮುಖ್ಯಮಂತ್ರಿಗಳು