ಶಿವಮೊಗ್ಗ: ನಗರದ ನವಲೆ ಕೆಎಸ್ಸಿಎ ಮೈದಾನದಲ್ಲಿ 19 ವರ್ಷದೊಳಗಿನವರ ಕೂಚ್ ಬೆಹಾರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಇನಿಂಗ್ಸ್ ಮುನ್ನಡೆಯೊಂದಿಗೆ ಮುಂಬೈ ವಿರುದ್ಧ ಜಯಗಳಿಸಿದೆ. ನಾಲ್ಕು ದಿನದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ತಂಡ ಮೊದಲ ಇನಿಂಗ್ಸ್ನಲ್ಲಿ 380 ರನ್ ಗಳಿಗೆ ಅಲೌಟ್ ಆಯಿತು. ನಂತರ ಎರಡನೇ ದಿನಕ್ಕೆ ತನ್ನ ಆಟ ಪ್ರಾರಂಭಿಸಿದ ಕರ್ನಾಟಕ ತಂಡ ಆರಂಭಿಕ ಆಟಗಾರ ಪ್ರಕಾರ್ ಚರ್ತುವೇದಿ ರವರು 638 ಬಾಲ್ ಗಳಿಗೆ 404 ರನ್ ಗಳಿಸಿ ಅಜೇಯರಾಗಿ ಉಳಿದರು.
ಉಳಿದಂತೆ ಹರ್ಷಿತ್ ರವರು 169 ರನ್ ಗಳಿಸಿದರೆ, ಭಾರತ ತಂಡ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 22 ರನ್ ಗಳಿಸಿದ್ದರು. ಈ ಮೂಲಕ ಕರ್ನಾಟಕ ಇನಿಂಗ್ಸ್ ಮುನ್ನಡೆಯೊಂದಿಗೆ 8 ವಿಕೆಟ್ ಕಳೆದು ಕೊಂಡು 890 ರನ್ ಗಳಿಸಿತು. 404 ರನ್ ಗಳಿಸಿ ಅಜೇಯರಾಗಿ ಉಳಿದ ಪ್ರಕಾರ್ ಚರ್ತುವೇದಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಕೆಎಸ್ಸಿಎ ಸದಸ್ಯ ಎಂ ಎಸ್ ವಿನಯ್, ಕೆಎಸ್ಸಿಎನ ಸದಸ್ಯರಾದ ಮಾಧವ್ ರಾವ್ ಹಾಗೂ ವೈ.ಜಿ.ಶಶಿಧರ್, ಬಿಸಿಸಿಐನ ಮ್ಯಾನೇಜರ್ ಕೃಷ್ಣ, ಕೆಎಸ್ಸಿಎ ಶಿವಮೊಗ್ಗ ಜೋನಲ್ ಚೇರ್ಮನ್ ರಾಜೇಂದ್ರ ಕಾಮತ್ ಹಾಗೂ ಕನ್ವಿನರ್ ಸದಾನಂದ ಹಾಜರಿದ್ದರು.
ಇದನ್ನೂ ಓದಿ: ಅಂಡರ್-19 ಕ್ರಿಕೆಟ್: ಪ್ರಕಾರ್ ಚತುರ್ವೇದಿ ದ್ವಿಶತಕ, ಕರ್ನಾಟಕಕ್ಕೆ 246 ರನ್ ಮುನ್ನಡೆ
ರಣಜಿ ಟ್ರೋಫಿ, ಕರ್ನಾಟಕದ ವಿರುದ್ಧ ಗುಜರಾತ್ಗೆ 6 ರನ್‌ಗಳ ಜಯ: ಮತ್ತೊಂದೆಡೆ, ರಣಜಿ ಟ್ರೋಫಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಕರ್ನಾಟಕ ವಿರುದ್ದ ಗುಜರಾತ್ ತಂಡ ರೋಚಕ ಗೆಲುವು ಸಾಧಿಸಿದೆ. ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಗುಜರಾತ್ ತಂಡ 6 ರನ್‌ಗಳ ಗೆದ್ದು ಬೀಗಿತು. ಎರಡನೇ ಇನ್ನಿಂಗ್ಸ್ನಲ್ಲಿ ಗೆಲುವಿಗೆ 109 ರನ್‌ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ಆರಂಭಿಕ ವಿಕೆಟ್ ನಷ್ಟವಿಲ್ಲದೇ 50 ರನ್ ಗಳಿಸಿ ಗೆಲುವಿನ ದಡಕ್ಕೆ ಸಮೀಪಿಸಿತ್ತು. ಈ ವೇಳೆ, ಗುಜರಾತ್ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಮುಂದಿನ 53 ರನ್ ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ 103 ರನ್‌ಗಳಿಗೆ ಸರ್ವಪತನ ಕಂಡು ಸೋಲು ಕಂಡಿತು.