ಶಿವಮೊಗ್ಗ: ಇಂದಿನಿಂದ ಪ್ರಾರಂಭವಾದ ಶಾಲೆಗೆ ಮಕ್ಕಳು ಸಂತೋಷವಾಗಿ ಬರುತ್ತಿದ್ದಾರೆ. ಮಕ್ಕಳ ಜೊತೆ ಬೆರೆಯುವಾಗ ಸಂತೋಷವಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಾಲೆ ಪ್ರಾರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಹೊರವಲಯದ ಮಲವಗೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಬೆರೆತು ಸಂತಸ ಹಂಚಿಕೊಂಡರು. ಶಾಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಲೆಯನ್ನು ಬಾಳೆ, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.
ಸಿಎಂ ಜೊತೆ ನಡೆದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಇಂದಿನಿಂದ ಶಾಲೆ ಪ್ರಾರಂಭದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಇಂದಿನಿಂದ 1 ರಿಂದ 5 ನೇ ತರಗತಿಯವರೆಗೂ ಶಾಲೆ ಪ್ರಾರಂಭ ಮಾಡಿದ್ದೇವೆ ಎಂದರು.
ಶಾಲೆಗೆ ಮಕ್ಕಳು ಸಹ ತುಂಬಾ ಸಂತೋಷದಿಂದಲೇ ಬರ್ತಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲೂ ಸಹ ಶಾಲೆಗಳು ಉತ್ತಮವಾಗಿ ಪ್ರಾರಂಭವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಸಂತೋಷದಿಂದ ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ. ಅನೇಕ ಶಾಲೆಗಳಲ್ಲಿ ಪೋಷಕರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಶಾಲೆಗೆ ಬರುವ ಮಕ್ಕಳಿಗೆ ಹೂವು, ಚಾಕಲೇಟ್ ನೀಡಿ ಸ್ವಾಗತ ಕೋರುತ್ತಿದ್ದಾರೆ ಎಂದರು.
ಸಿಲಬಸ್ ಬದಲಾವಣೆಯ ಬಗ್ಗೆ ಚಿಂತನೆ ಇಲ್ಲ: ಶಾಲೆಗಳು ಈಗ ಪ್ರಾರಂಭವಾಗಿದೆ. ಸದ್ಯಕ್ಕೆ ಸಿಲಬಸ್ ಬದಲಾವಣೆಯ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ನಮ್ಮ ಗುರಿ ಇಷ್ಟು ದಿನ ಮಕ್ಕಳಿಗೆ ಪಾಠದಿಂದ ವಂಚಿತರಾಗಿದ್ದರು. ಅವರಿಗೆ ಪಾಠಗಳನ್ನು ಮಾಡುವುದರ ಬಗ್ಗೆ ನಮ್ಮ ಗಮನವಿದೆ. ಡಿಸೆಂಬರ್ನಲ್ಲಿ ಒಂದು ಸಭೆ ನಡೆಸಲಾಗುವುದು. ಅಂದು ಎಲ್ಲರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಎಕ್ಸಾಂಗೆ ಬೇಕಾದ್ರೆ ಸಿಲಬಸ್ ಕಡಿಮೆ ಮಾಡುತ್ತೇವೆ. ಆದರೆ ಪಾಠ ಮಾಡುವುದರಲ್ಲಿ ಕಡಿಮೆ ಮಾಡುವುದಿಲ್ಲ ಎಂದರು.
ಶಿಕ್ಷಕರ ಸಮಸ್ಯೆ ಪರಿಹರಿಸಲಾಗುವುದು: ಶಿಕ್ಷಕರು ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಜೊತೆ ಈಗಾಗಲೇ ನಾಲ್ಕೈದು ಭಾರಿ ಮಾತನಾಡಿದ್ದೇವೆ. ಅವರಿಗೂ ನಮಗೂ ಸ್ವಲ್ಪ ವ್ಯತ್ಯಾಸವಿದೆ. ಶಿಕ್ಷಕರು ಇಲಾಖೆಯ ಪರೀಕ್ಷೆ ಇಲ್ಲದೆ ಮುಂಬಡ್ತಿ ನೀಡಿ ಎನ್ನುತ್ತಿದ್ದಾರೆ. ಆದರೆ ಇಲಾಖೆ ಪರೀಕ್ಷೆ ಕಡ್ಡಾಯ ಎನ್ನುತ್ತಿದ್ದಾರೆ. ಇದನ್ನು ಸರಿಪಡಿಸಲಾಗುವುದು. ಮುಂಬರುವ ದಿನಗಳಲ್ಲಿ ಅಂಗನವಾಡಿ ಪ್ರಾರಂಭ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದ 8 ಸಾವಿರ ಸರ್ಕಾರಿ ಶಾಲೆಗಳು ದುರಸ್ಥಿ: ರಾಜ್ಯದ 8 ಸಾವಿರ ಸರ್ಕಾರಿ ಶಾಲೆಗಳು ದುರಸ್ಥಿ ಆಗಬೇಕಿದೆ. ಹಂತ-ಹಂತವಾಗಿ ಮತ್ತು ಸ್ಥಳೀಯರ ಸಹಕಾರ ಸಲಹೆ ಪಡೆದು ಅಭಿವೃದ್ದಿ ಮಾಡಲಾಗುವುದು. ಶಾಲೆಗಳ ದತ್ತು ಕುರಿತು ‘ನನ್ನ ಶಾಲೆ ನನ್ನ ಕೂಡುಗೆ’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಾಲೆಯ ಎಲ್ಲಾ ಮಾಹಿತಿಯನ್ನು ಹಾಕಲಾಗುವುದು. ಇದನ್ನು ನೋಡಿ ಶಾಲೆ ದತ್ತು ತೆಗೆದುಕೊಳ್ಳಬಹುದಾಗಿದೆ ಎಂದರು.