ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆ ಮೇಲೆ ನಿನ್ನೆ ಉದ್ದೇಶಪೂರ್ವಕವಾಗಿ ದಾಳಿ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಇಂದು ಶಿಕಾರಿಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಿನ್ನೆ ನಡೆದಿದ್ದು ಅತ್ಯಂತ ದುರದೃಷ್ಟಕರ ಘಟನೆ. ಕೆಲವರ ತಪ್ಪು ತಿಳುವಳಿಕೆ, ಪ್ರಚೋದನೆಯಿಂದ ದಾಳಿಯಾಗಿದೆ ಎಂದು ಹೇಳಿದರು.
ಬಂಜಾರ ಜನಾಂಗದವರ ಅಭಿವೃದ್ಧಿ ಮಾಡಿದವರು ಯಡಿಯೂರಪ್ಪ. ಅವರು ಸೂರಗೊಂಡನಕೊಪ್ಪ ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಿದ್ದರು. ದಾಳಿ ನಡೆಸಿದವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕೆಲವರು ತಪ್ಪು ತಿಳುವಳಿಕೆಯಿಂದ ಈ ರೀತಿ ಮಾಡಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾಗಿ ಸಚಿವರು ತಿಳಿಸಿದ್ದಾರೆ.
ನಮ್ಮ ಪೊಲೀಸರ ಮೇಲೆ ಹಲ್ಲೆಯಾಗಿದೆ. ಇದು ನಮಗೆ ನೋವುಂಟು ಮಾಡಿದೆ. 2-3 ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಶಿಕಾರಿಪುರದ ಘಟನೆ ಅನಿರೀಕ್ಷಿತವಾಗಿದ್ದು, ಪೊಲೀಸರು ತಾಳ್ಮೆ ವಹಿಸಿದ್ದಕ್ಕೆ ಪೆಟ್ಟು ತಿಂದಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು.
ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕೆಲವು ಪಕ್ಷದವರು ಇಂಥ ಪ್ರಯತ್ನ ಮಾಡಿದ್ದಾರೆ. ಇದು ಪೊಲೀಸರ ತನಿಖೆಯಿಂದ ಹೊರಬರಲಿದೆ. ಅಮಾಯಕರನ್ನು ಪ್ರಚೋದನೆಗೆ ಒಳಪಡಿಸಿ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಯಾರಿಗಾದರೂ ತಾಲೂಕು ಕಚೇರಿಗೆ ಬಂದು ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಇದಕ್ಕೂ ಮುನ್ನ ಗೃಹ ಸಚಿವರು ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆ ಸಮಲೋಚನೆ ನಡೆಸಿದರು. ಎಸ್ಪಿ ಮಿಥುನ್ ಕುಮಾರ್ ಕೂಡ ಹಾಜರಿದ್ದರು.
ದೆಹಲಿಯಿಂದ ವಾಪಸ್ ಆದ ಬಿ.ವೈ.ರಾಘವೇಂದ್ರ: ಸಂಸದ ಬಿ.ವೈ.ರಾಘವೇಂದ್ರ ನಿನ್ನೆ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದರು. ಆದರೆ ಶಿಕಾರಿಪುರದ ತಮ್ಮ ಮನೆ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಇಂದು ಮುಂಜಾನೆ ಶಿಕಾರಿಪುರಕ್ಕೆ ತೆರಳಿದ್ದಾರೆ.
ಇದನ್ನೂ ಓದಿ:ಲೋಕಾಯುಕ್ತ ಕಚೇರಿಯಲ್ಲೇ ರಾತ್ರಿ ಕಳೆದ ಮಾಡಾಳ್ ವಿರೂಪಾಕ್ಷಪ್ಪ