ಶಿವಮೊಗ್ಗ: ಮಗನ ಮದುವೆ ಮಾಡುವ ಹುಮ್ಮಸ್ಸಿನಲ್ಲಿದ್ದ ತಂದೆ ಮಗನ ಮದುವೆ ನೋಡದೇ ಇಹಲೋಕ ತ್ಯಜಿಸಿರುವ ಘಟನೆ ಭದ್ರಾವತಿಯ ಉಜ್ಜೈನಿಪುರದಲ್ಲಿ ನಡೆದಿದೆ.
ಬೋರೇಗೌಡ ಎಂಬುವರು ಮಗನ ಮದುವೆಗೂ ಮುನ್ನಾ ನಿಧನರಾಗಿದ್ದಾರೆ. ಬೋರೇಗೌಡ ಅವರ ಮಗ ಚೇತನ್ ಎಂಬುವರಿಗೆ ಶಿವಮೊಗ್ಗ ತಾಲೂಕು ಸಿದ್ದರಹಳ್ಳಿ ಗ್ರಾಮದ ಯುವತಿಯ ಜೊತೆ ಇಂದು ಮದುವೆ ಫಿಕ್ಸ್ ಆಗಿತ್ತು. ಮಗನ ಮದುವೆಯ ಸಿದ್ದತೆಯಲ್ಲಿದ್ದ ಬೋರೆಗೌಡರು ಎಲ್ಲ ತಯಾರಿ ನಡೆಸಿದ್ದರು.
ಮದುವೆಯ ಓಡಾಟದಲ್ಲಿದ್ದ ಬೋರೆಗೌಡರು ಮನೆಯಲ್ಲಿ ದಿಢೀರ್ ಎಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಹೋದಾಗ ವೈದ್ಯರು ಬೋರೆಗೌಡರು ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದರಿಂದ ಮದುವೆ ಸಡಗರದಲ್ಲಿದ್ದ ಕುಟಂಬಸ್ಥರಿಗೆ ಬರಸಿಡಿಲು ಬಡಿದಂತೆ ಆಗಿದೆ. ಚೇತನ್ ಅವರ ಮದುವೆ ಇಂದು ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂದಿರದಲ್ಲಿ ನಡೆಯಬೇಕಿತ್ತು.
ಆದರೆ, ಬೋರೇಗೌಡ ಸಾವಿನಿಂದಾಗಿ ಮದುವೆ ನಿಂತಿದೆ. ಮಗ ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ತಂದೆ ಮೃತಪಟ್ಟಿದ್ದರಿಂದ ಕುಟುಂಬಸ್ಥರು ದಾರಿ ಕಾಣದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಬೋರೆಗೌಡ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಓದಿ: ಆಟೋ ಕಿತ್ತುಕೊಂಡಿದ್ದಕ್ಕೆ ಪ್ರಾಣ ಕಿತ್ತುಕೊಂಡ ಹಂತಕ.. ಸಂಧಾನಕ್ಕೆ ಕರೆಸಿ ಸಮಾಧಿ ದಾರಿ ತೋರಿಸಿದ ಆರೋಪಿ ಅರೆಸ್ಟ್