ಶಿವಮೊಗ್ಗ: ಪರಿಸರ ಉಳಿದರೆ ಮನುಕುಲಕ್ಕೆ ಒಳಿತು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಪರಿಸರ ಜಾಗೃತಿ ಅವಶ್ಯ ಎಂದು ಜಡೆ ಸಂಸ್ಥಾನ ಮಠದ ಶ್ರೀ ಡಾ.ಮಹಾಂತ ಸ್ವಾಮೀಜಿ ಕರೆ ನೀಡಿದ್ದಾರೆ.
ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದ ರಸ್ತೆಯ ವಿಭಜಕಗಳಲ್ಲಿ ರೋಟರಿ ಸಂಸ್ಥೆ ನೇತೃತ್ವದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದದರು.
ಸಸಿಗಳನ್ನು ನೆಟ್ಟರೆ ಸಾಲದು, ಪೋಷಣೆ ಮುಖ್ಯ. ಪರಿಸರ ಚೆನ್ನಾಗಿದ್ದರೆ ಮನುಕುಲದ ಉಳಿವು ಸಾಧ್ಯ. ರೋಟರಿ ಸಂಸ್ಥೆಯವರು ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಬಣ್ಣಿಸಿದರು.
ಬಳಿಕ ಪಟ್ಟಣ ಪಂಚಾಯಿತಿ ಸದಸ್ಯ ವೀರೇಶ ಮೇಸ್ತ್ರೀ ಮಾತನಾಡಿ, ಪರಿಸರ ರಕ್ಷಣೆ ಕೇವಲ ಪಟ್ಟಣಕ್ಕೆ ಸೀಮಿತವಾಗಿರದೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಜಾಗೃತಿ ಮೂಡಿಸಬೇಕಿದೆ. ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ರಾಜು ಹಿರಿಯಾವಲಿ, ನಿಯೋಜಿತ ಅಧ್ಯಕ್ಷ ಟಿ.ಆರ್. ಸಂತೋಷ್, ಪ್ರಮುಖರಾದ ಡಿ.ಎಸ್. ಶಂಕರ್, ನಾಗರಾಜ ಗುತ್ತಿ, ಹಾಲೇಶ್ ನವುಲೆ, ಇಂದೂಧರ ಒಡೆಯರ್, ಎಸ್. ಕೃಷ್ಣಾನಂದ, ನೆಮ್ಮದಿ ಸುಬ್ಬು, ವಿನೋದ್, ಹರಿಚಂದ್ ನರ್ಸರಿಯ ಜಯದೇವ್ ಇತರರಿದ್ದರು.