ಶಿವಮೊಗ್ಗ: ಮಲೆನಾಡನ್ನು ಪ್ರತಿವರ್ಷ ಆತಂಕದ ಕೂಪಕ್ಕೆ ತಳ್ಳುತ್ತಿದ್ದ ಮಂಗನಕಾಯಿಲೆ ಆರ್ಭಟ ಈ ವರ್ಷ ಗಣನೀಯವಾಗಿ ಕಡಿಮೆಯಾಗಿದೆ.
ಪ್ರತಿ ವರ್ಷ ಮಂಗನ ಕಾಯಿಲೆಯಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವರ್ಷ ಕೊರೊನಾ ಹೇಗೆ ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿದೆಯೋ ಅದೇ ರೀತಿ ಮಂಗನಕಾಯಿಲೆ (ಕೆಎಫ್ಡಿ) ಮಲೆನಾಡಿನಲ್ಲಿ ಆತಂಕ ಮೂಡಿಸುತ್ತಿತ್ತು. ಈ ವರ್ಷ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ನಿಗದಿತ ಅವಧಿಯಲ್ಲಿ ತೆಗೆದುಕೊಂಡಿದ್ದರಿಂದ ಮಂಗನಕಾಯಿಲೆಯ ರಣಕೇಕೆ ತಗ್ಗಿದೆ.
ಪ್ರತಿ ವರ್ಷ ಮಲೆನಾಡಿನ ಜನರು ಮನೆಯಿಂದ ಹೊರಬರಲು ಹೆದರುವಂತಹ ಸ್ಥಿತಿಯನ್ನು ಮಂಗನಕಾಯಿಲೆ ತಂದಿಡುತ್ತಿತ್ತು. ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ 343 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದವು. ಜೊತೆಗೆ ಮಹಾಮಾರಿ ಮಂಗನಕಾಯಿಲೆಗೆ ಬರೋಬ್ಬರಿ 23 ಮಂದಿ ಮೃತಪಟ್ಟಿದ್ದರು. ಆದರೆ ಈ ವರ್ಷ ಕೇವಲ 184 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ನಾಲ್ವರು ಕೆಎಫ್ಡಿಗೆ ಬಲಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿತ್ತು. ಇದು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳ ಜನರ ಆತಂಕಕ್ಕೂ ಕಾರಣವಾಗಿತ್ತು. ಆದರೆ ಈ ವರ್ಷ ಸಮಯಕ್ಕೆ ಸರಿಯಾಗಿ ಮಲೆನಾಡು ಭಾಗದ ಜನರಿಗೆ ವ್ಯಾಕ್ಸಿನೇಷನ್ ನೀಡಿದ್ದರಿಂದಾಗಿ ಶೇ. 50ರಷ್ಟು ಮಂಗನಕಾಯಿಲೆ ತಡೆಯುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡಿನ ಜನರಿಗೆ ಮೂರು ಹಂತದಲ್ಲಿ ಒಟ್ಟು 2.30 ಲಕ್ಷ ಲಸಿಕೆ ಹಾಕಲಾಗಿದೆ. ಇದು ಮಂಗನಕಾಯಿಲೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗ್ತಿದೆ.
ಒಟ್ಟಾರೆ, ಪ್ರತಿ ವರ್ಷ ಮಲೆನಾಡು ಜನರ ನಿದ್ದೆಗೆಡಿಸುತ್ತಿದ್ದ ಮಹಾಮಾರಿ ಮಂಗನಕಾಯಿಲೆ ಗಣನೀಯವಾಗಿ ತಗ್ಗಿರುವುದು ಈ ಭಾಗದ ಜನರಲ್ಲಿ ಸಮಾಧಾನ ತಂದಿದೆ. ಆರೋಗ್ಯ ಇಲಾಖೆ ಇದೇ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡು ಮಲೆನಾಡನ್ನು ಮಂಗನಕಾಯಿಲೆ ಮುಕ್ತವಾಗಿಸಲಿ ಎಂಬುದು ಎಲ್ಲರ ಆಶಯ.