ಶಿವಮೊಗ್ಗ: ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪೊಲೀಸರು ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿರುವುದೇ ಕಾರಣ ಎಂದು ಪೊಲೀಸರ ವಿರುದ್ಧ ದೂರು ದಾಖಲಾಗಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರಿನ ಕನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕನ್ನೆಕೊಪ್ಪ ಗ್ರಾಮದ ಮಂಜುನಾಥ್ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಂಜುನಾಥ್ ಆತ್ಮಹತ್ಯೆ ಕುರಿತು ಆತನ ಪತ್ನಿ ಕಮಲಾಕ್ಷಿ ಪೊಲೀಸರ ಹಲ್ಲೆಯೇ ಕಾರಣ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಮಂಜುನಾಥ್ನನ್ನು ಹೊಳೆಹೊನ್ನೂರು ಪೊಲೀಸರು ವಿಚಾರಣೆಗೆಂದು ಜೂನ್ 11 ರಂದು ಕರೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿ ಅಂದೇ ವಾಪಸ್ ಕಳುಹಿಸಿರುತ್ತಾರೆ. ದೂರು ನೀಡಿರುವ ಮೃತ ಮಂಜುನಾಥ್ನ ಪತ್ನಿ ಕಮಲಾಕ್ಷಿ ತಿಳಿಸಿರುವಂತೆ, ನಾನು ನನ್ನ ಗಂಡ ಮತ್ತು ಒಬ್ಬ ಮಗು ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ನನ್ನ ಅತ್ತೆ-ಮಾವ, ಮೈದುನ ಮತ್ತು ಆತನ ಹೆಂಡತಿ ಪ್ರತ್ಯೇಕವಾಗಿ ವಾಸ ಮಾಡಿ ಕೊಂಡಿರುತ್ತಾರೆ.
ಆದರೆ, ಜೂನ್ 11 ರಂದು ಸಂಜೆ 6.30 ಕ್ಕೆ ಏಕಾಏಕಿ ಪೊಲೀಸರು ಬಂದು ನನ್ನ ಪತಿಯನ್ನು ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದುಕೊಂಡು ಹೋಗಿ ಪೊಲೀಸರು ಹಲ್ಲೆ ನಡೆಸಿರುತ್ತಾರೆ. ನಂತರ ವಿಚಾರ ತಿಳಿದು ನನ್ನ ಮಾವ ಮೈದುನ ರಾತ್ರಿ 8 ಗಂಟೆಗೆ ಠಾಣೆಗೆ ಹೋಗಿ ಪತಿಯನ್ನು ಬಿಡಿಸಿಕೊಂಡು ಬಂದಿರುತ್ತಾರೆ. ಆದರೆ, ಪೊಲೀಸರ ಹಲ್ಲೆಯಿಂದ ಪತಿ ಮಂಜುನಾಥ್ ಮಂಕಾಗಿದ್ದು, ಮನೆಯಿಂದ ಹೊರಗೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು.
ಇದನ್ನೂ ಓದಿ: Kannada actress arrested: ಪರಿಚಯ - ಪ್ರಣಯ, ದೋಖಾ ಆರೋಪ: ಕನ್ನಡದ ಸಹ ನಟಿಯ ಬಂಧನ
ಜೂನ್ 15 ರ ರಾತ್ರಿ ಮಂಜುನಾಥ್ ಊಟ ಮುಗಿದ ಮೇಲೆ ನಾನು ಕ್ರಿಕೆಟ್ ನೋಡುತ್ತೇನೆ, ನೀವು ಮನೆಯ ಮುಂದಿನ ರೂಂನಲ್ಲಿ ಮಲಗಿ ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಮಗ ಬಾಗಿಲ ಬಳಿಯ ಮುಂದಿನ ರೂಂನಲ್ಲಿ ಮಲಗಿದ್ದೆವೆ. ಬೆಳಗ್ಗೆ(ಜೂನ್ 16-6-2023) ಮನೆಯ ಬಾಗಿಲು ಬಡಿದರು ಬಾಗಿಲು ತೆರೆಯದೇ ಹೋದಾಗ ಅಕ್ಕಪಕ್ಕದವರನ್ನು ಕರೆಯಿಸಿ ಕಿಟಕಿ ಒಡೆದು ನೋಡಿದಾಗ ಪತಿ ಮಂಜುನಾಥ್ ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ.
ಪೊಲೀಸರು ದೂರು ನೀಡದೇ ಏಕಾಏಕಿ ಮನೆಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ನನ್ನ ಪತಿ ಮನನೊಂದು ಕೈಕಾಲು ನೋವು ಭಾದೆ ತಾಳಲಾರದೆ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕಾಗಿ ಮೃತ ಮಂಜುನಾಥ್ ಪತ್ನಿ ಕಮಲಾಕ್ಷಿ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಮಂಜುನಾಥ್ಗೆ 2 ವರ್ಷದ ಮಗು ಇದ್ದು, ಪತ್ನಿ ಕಮಲಾಕ್ಷಿ ಗರ್ಭಣಿಯಾಗಿದ್ದಾರೆ. ತನ್ನ ಪತಿ ಸಾವಿಗೆ ಪೊಲೀಸರು ನಡೆಸಿದ ಹಲ್ಲೆಯೇ ಕಾರಣ ಎಂದು ಪತ್ನಿ ಕಮಲಾಕ್ಷಿ ದೂರು ನೀಡಿದ್ದಾರೆ.
ಇದನ್ನೂ ಓದಿ: Student suicide: ನೀಟ್ ಪರೀಕ್ಷೆಯಲ್ಲಿ 2ನೇ ಬಾರಿಗೆ ಫೇಲ್; ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ