ಶಿವಮೊಗ್ಗ : ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ತೀರ್ಥಹಳ್ಳಿಯಲ್ಲಿಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಸರ್ವೇ ಮಾಡಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ನಮ್ಮ ಹೈಕಮಾಂಡ್ ನಿರ್ಧಾರಗಳು ಯಶಸ್ವಿಯಾಗಿವೆ. ಅದೇ ರೀತಿ ಕರ್ನಾಟಕದಲ್ಲೂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿ ಮಾಡಿತ್ತು. ಲಕ್ಷ್ಮಣ ಸವದಿ ಅವರನ್ನೂ ಉಪ ಮುಖ್ಯಮಂತ್ರಿ ಮಾಡಿತ್ತು. ಅವರಿಬ್ಬರಿಗೆ ಪಕ್ಷ ಎಲ್ಲ ರೀತಿಯ ಸೌಲಭ್ಯ, ಅವಕಾಶ ನೀಡಿದೆ. ಆದರೂ ಅವರು ಪಕ್ಷ ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ. ಸೈದ್ಧಾಂತಿಕವಾಗಿ ನಾವು ಇದ್ದರೆ ಪಕ್ಷ ಬಿಡುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ಜನರು ಅವರನ್ನು ನಂಬುವುದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.
ನಾನು ಬಿಜೆಪಿಯಿಂದ ಸತತ 10ನೇ ಬಾರಿಗೆ ಒಂದೇ ಪಕ್ಷ, ಒಂದೇ ಚಿಹ್ನೆಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 9 ಚುನಾವಣೆಯಲ್ಲಿ 4 ಬಾರಿ ತೀರ್ಥಹಳ್ಳಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಇಂದು ನನ್ನ ನಾಮಪತ್ರ ಸಲ್ಲಿಕೆಯ ವೇಳೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಬಂದು ಆಶೀರ್ವಾದ ಮಾಡಿದ್ದಾರೆ ಎಂದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ದಿಯ ಮೇಲೆ ಮತ ಕೇಳುತ್ತೇನೆ. ಇಷ್ಟು ದೊಡ್ಡ ಪ್ರಮಾಣದ ಅಭಿವೃದ್ದಿ ಒಂದೇ ಅವಧಿಯಲ್ಲಿ ಆಗಿರಲಿಲ್ಲ. ಮೊದಲ ಒಂದು ವರ್ಷ ಸಮ್ಮಿಶ್ರ ಸರ್ಕಾರವಿತ್ತು. ನಂತರದ ಎರಡು ವರ್ಷ ಕೋವಿಡ್‌ನಿಂದ ಸಮಸ್ಯೆ ಆಗಿತ್ತು. ಉಳಿದೆರಡು ವರ್ಷಗಳಲ್ಲಿ ಕ್ಷೇತ್ರಕ್ಕೆ 3,200 ಕೋಟಿ ರೂಪಾಯಿ ಹಣ ತಂದಿದ್ದೇನೆ. ಯಾವುದೇ ಹಳ್ಳಿಗೆ ಹೋದರೂ ಅಭಿವೃದ್ಧಿ ಕಾರ್ಯ ನಡೆಯುವುದನ್ನು ಗಮನಿಸಬಹುದು ಎಂದು ತಿಳಿಸಿದರು.
ಶಿವಮೊಗ್ಗ ನಗರ ಸೇರಿದಂತೆ ಉಳಿದ ಕ್ಷೇತ್ರದ ಟಿಕೆಟ್ ಇಂದು ಸಂಜೆಯೊಳಗೆ ಘೋಷಣೆ ಆಗುವ ಸಾಧ್ಯತೆ ಇದೆ. ನಮ್ಮ ಪ್ರತಿಸ್ಪರ್ಧಿ ಕಿಮ್ಮನೆ, ಎರಡು ಅವಧಿಗೆ 10 ವರ್ಷ ಅಧಿಕಾರ ಮಾಡಿದ್ದರು. ನಾನು ಸತತ ಮೂರು ಬಾರಿ ಆಯ್ಕೆಯಾಗಿದ್ದೆ. ಬದಲಾವಣೆ ನೋಡೋಣ ಅಂತ ಜನ ಬಯಸಿದ್ದರು. ಆ 10 ವರ್ಷ ನಿರಾಶಾದಾಯಕ ಕಾಲವಾಗಿತ್ತು. ನನ್ನನ್ನು ಸೋಲಿಸಲು ಪ್ರತಿಸ್ಪರ್ಧಿಗಳಾದ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ ಗೌಡ ಒಟ್ಟಾಗಿರಬಹುದು. ಆದರೆ ಅವರನ್ನು ಸೋಲಿಸಲು ಜನರು ಒಟ್ಟಾಗಿದ್ದಾರೆ. ಇದು ನನ್ನ ಕೊನೆಯ ಚುನಾವಣೆಯೂ ಹೌದು ಎಂದು ಆರಗ ಜ್ಞಾನೇಂದ್ರ ಹೇಳಿದರು.
ಸಾಂಕೇತಿಕ ನಾಮಪತ್ರ ಸಲ್ಲಿಸಿದ ಕಿಮ್ಮನೆ: ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಇಂದು ತಮ್ಮ ಅಪ್ತರೊಂದಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಸರ್ಕಾರದ ಅವಾಂತರ, ಭ್ರಷ್ಟಾಚಾರ ನೋಡಿದರೆ ಖಂಡಿತ ನಮ್ಮ ಸರ್ಕಾರ ಬರುತ್ತದೆ. ಜಗದೀಶ್ ಶೆಟ್ಟರ್ ಬಂದಿರುವುದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರು.
ಅಣ್ಣಾಮಲೈ ತೀರ್ಥಹಳ್ಳಿಯಲ್ಲಿ ಪ್ರಚಾರ ವಿಚಾರ: ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಪ್ರಚಾರ ಮಾಡಿ ಠೇವಣಿ ಹೋಗಿದೆ. ಅದನ್ನು ಇಲ್ಲೂ ಮುಂದುವರಿಸಬಹುದು. ಇದೀಗ ಆರ್.ಎಂ. ಮಂಜುನಾಥಗೌಡ ಬೆಂಬಲ ಆನೆಬಲ ಬಂದಂತಾಗಿದೆ. ಇದು ನನ್ನ ಕೊನೆಯ ಚುನಾವಣೆ ಆಗಲಿದೆ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ದೇಶದ ರಾಜಕೀಯಕ್ಕೆ ಪರ್ಯಾಯವಾಗಿಯೂ ರಾಜಕೀಯ ಮಾಡಬಹುದು ಅಂತ ತೋರಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಹಿಮಾಚಲದ ಕಥೆಯೇ ಪುನರಾವರ್ತನೆ