ಶಿವಮೊಗ್ಗ: ಭಾರತ ದೇಶವನ್ನು ಅನಿಮಿಯಾ ಮುಕ್ತ ಮಾಡಬೇಕು ಎಂಬ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಅನಿಮಿಯಾ ಮುಕ್ತ ಭಾರತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಅನಿಮಿಯಾದಿಂದ ಬಳಲುತ್ತಿರುವ ಮಹಿಳೆಯರು ದೇಶಕ್ಕೆ ಉತ್ತಮ ಮಕ್ಕಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇದರಿಂದ ದೇಶ ಪ್ರಗತಿ ಕುಂಠಿತವಾಗುತ್ತದೆ. ಈ ಹಿನ್ನೆಲೆಯಲ್ಲಿ 2022 ಕ್ಕೆ ದೇಶದಲ್ಲಿ ಅನಿಮಿಯಾ ಪ್ರಮಾಣ ತಗ್ಗಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಆರೋಗ್ಯ ಇಲಾಖೆಗಳ ಮೂಲಕ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ, ತಾಲೂಕು ಆರೋಗ್ಯಾಧಿಕಾರಿಗಳಿಗೆ ಹಾಗೂ ತಾಲೂಕು ಮೇಲ್ವಿಚಾರಕ ಸಿಬ್ಬಂದಿಗೆ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಾಗಾರಕ್ಕಿಂತ ಮುಂಚೆ ತಾಲೂಕು ಮೇಲ್ವಿಚಾರಕರಿಂದ ಅನಿಮೀಯಾ ಕಡಿಮೆ ಮಾಡಲು, ಮುಖ್ಯವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಉತ್ತಮ ಆಹಾರನ್ನು ಸೇವಿಸಬೇಕು ಎಂಬ ಸ್ಲೋಗನ್ ನೊಂದಿಗೆ, ಯಾವ ರೀತಿಯ ಆಹಾರ ಸೇವನೆ ಮಾಡಬೇಕು, ಉತ್ತಮ ಪೌಷ್ಟಿಕ ಆಹಾರ ಯಾವುದು, ಆಹಾರ ತಯಾರಿಕ ಕ್ರಮ ಏನೂ ಎಂಬುದರ ಬಗ್ಗೆ ಒಂದು ಪ್ರಾತ್ಯಕ್ಷಿತೆಯನ್ನು ಮಾಡಲಾಗಿತ್ತು. ಇಲ್ಲಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದಲೂ ಸಹ ಪೌಷ್ಟಿಕ ಆಹಾರ ತಯಾರು ಮಾಡಿ ತರಲಾಗಿತ್ತು.
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಎಷ್ಟಿರಬೇಕು:
ಪ್ರತಿಯೊಬ್ಬ ಮನುಷ್ಯರಲ್ಲಿ ಹಿಮೋಗ್ಲೋಬಿನ್ ಎಷ್ಟಿರಬೇಕು ಎಂಬ ಪ್ರಮಾಣವನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಹಿಳೆಯರಲ್ಲಿ ಶೇ12- 14 ಇರಬೇಕು, ಪುರುಷರಲ್ಲಿ ಶೇ 13-14 ರಷ್ಟು ಇರಬೇಕು. ಆದರೆ ನಮ್ಮ ದೇಶದ ಮಹಿಳೆಯರಲ್ಲಿ ಶೇ 8-10 ರಷ್ಟು ಮಾತ್ರ ಇದೆ. ನಮ್ಮ ರಾಜ್ಯದ ಶೇ. 44 ರಿಂದ 48 ರಲ್ಲಿ ಜನರಲ್ಲಿ ರಕ್ತ ಹಿನತೆಯಿಂದ ಬಳಲುತ್ತಿದ್ದಾರೆ.
ರಕ್ತಹಿನತೆಗೆ ಪ್ರಮುಖ ಕಾರಣಗಳು:
ಬಯಲು ಶೌಚಕ್ಕೆ ಹೋಗುವುದು, ಬರಿಗಾಲಿನಲ್ಲಿ ನಡೆಯುವುದು, ಪೌಷ್ಠಿಕಾಂಶ ಇಲ್ಲದ ಆಹಾರ ಸೇವನೆ ಮಾಡುವುದು, ಸರಿಯಾಗಿ ಕೈ ತೊಳೆಯದೆ ಇರುವುದು, ಸರಿಯಾದ ಪೌಷ್ಠಿಕಾಂಶ ಇಲ್ಲದ ಕಾರಣ ಹೊಟ್ಟೆಯಲ್ಲಿ ಜಂತು ಹುಳವಾಗಿ ರಕ್ತಹಿನತೆ ಉಂಟಾಗುತ್ತದೆ.
ಸರ್ಕಾರದ ಕ್ರಮಗಳು:
ಇದಕ್ಕಾಗಿ ಸರ್ಕಾರ ಆರೋಗ್ಯ ಇಲಾಖೆಯ ಮೂಲಕ ಕಬ್ಬಿಣಾಂಶದ ಮಾತ್ರೆಗಳನ್ನು ಗರ್ಭಿಣಿಯರಿಗೆ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. ವರ್ಷಕ್ಕೆರಡು ಬಾರಿ ಜಂತು ಹುಳು ನಿವಾರಣೆ ಜಂತು ಹುಳು ನಿವಾರಣಾ ಮಾತ್ರೆ ನೀಡಲಾಗುತ್ತದೆ. ಶಾಲಾ ಮಕ್ಕಳಿಗೆ ಶೌಚಾಲಯದ ಬಗ್ಗೆ ಅರಿವು ಉಂಟು ಮಾಡುತ್ತಿದೆ.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸೂರಗಿಹಳ್ಳಿ ಅವರು, ಅನಿಮೀಯಾ ಮುಕ್ತಭಾರತದ ಕನಸನ್ನು ನೆನಸು ಮಾಡೋಣ.ಇಲಾಖೆಯ ಸಿಬ್ಬಂದಿಗಳು ಇದನ್ನು ತೊಡೆದು ಹಾಕಲು ಸಹಕಾರಿಯಾಗಬೇಕೆಂದು ಮನವಿ ಮಾಡಿದರು. ಈ ರೀತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಇದೇ ರೀತಿಯ ಆಹಾರ ಪದಾರ್ಧಗಳ ಮೂಲಕ ಅರಿವು ಮೂಡಿಸಬೇಕು ಎಂದು ಸಿಬ್ಬಂದಿಗೆ ಕಿವಿ ಮಾತು ಹೇಳಿದರು.