ಶಿವಮೊಗ್ಗ: ''ವಿರೋಧ ಪಕ್ಷದ ನಾಯಕ ಹಾಗೂ ರಾಜಾಧ್ಯಕ್ಷರ ಆಯ್ಕೆಯಾದ ಬಳಿಕ ಬಿಜೆಪಿಯಲ್ಲಿ ಎರಡು ಪಾರ್ಟಿ ಆಗುತ್ತದೆ'' ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ದೇಶದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ ಪಕ್ಷ ಎನ್ನುವ ಬಿಜೆಪಿ ಪಕ್ಷದ ಕಥೆ ಹೀಗಾಗಿದೆ. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಯಿದೆ ಅಂತ ಗೊತ್ತಿರದವರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಕೊಡಲ್ಲ ಎನ್ನುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಯೇ ಇಲ್ಲದಂತಾಗಿದೆ'' ಎಂದು ವಾಗ್ದಾಳಿ ನಡೆಸಿದರು. ''ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನನ್ನ ಪ್ರಕಾರ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡುತ್ತಾರೆ ಅನಿಸುತ್ತೆ ಎಂದು ಲೇವಡಿ ಮಾಡಿದರು. ಬಿಜೆಪಿ ಬಾಯಿ ಬಂದಂತೆ ಹೇಳಿಕೆಗಳನ್ನು ನೀಡುವುದನ್ನು ನೋಡಿದರೆ ನಮಗೆ ಕನಿಕರ ಬರುತ್ತದೆ'' ಎಂದರು.
ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ನಡೆದಿದ್ದು ದುರ್ದೈವ, ಸದನದ ಘನತೆಗೆ ಧಕ್ಕೆಯಾಗಿದೆ: ಹೆಚ್.ಕೆ ಪಾಟೀಲ್
ಕಿಮ್ಮನೆ ಉಪವಾಸ ಸತ್ಯಾಗ್ರಹ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ 9 ವರ್ಷದ ಆಡಳಿತಾವಧಿಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೇ ಇರುವುದರ ವಿರುದ್ಧ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ ನಡೆಸಿದರು. ನಗರದ ಗಾಂಧಿ ಪಾರ್ಕ್ನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಿ ಅವರು ಮಾತನಾಡಿದರು. ಇಂದು ನಾವು ಬಿಜೆಪಿಯ ಸಿದ್ಧಾಂತದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇನೆ. ಅಧಿಕಾರವಿಲ್ಲದೇ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ಬಿಜೆಪಿಯವರಿದ್ದಾರೆ. ಇದರಿಂದಲೇ ಹಲವು ರಾಜ್ಯಗಳಲ್ಲಿ ಬೇರೆ ಮಾರ್ಗಗಳ ಮೂಲಕ ಅಧಿಕಾರ ನಡೆಸುತ್ತಿದ್ದಾರೆ ಎಂದರು.
''ತಮ್ಮ ಪಕ್ಷದವರೂ ಸಹ ಬಿಜೆಪಿ ಪ್ರಣಾಳಿಕೆ ಬಗ್ಗೆ ತಿಳಿದುಕೊಂಡಿಲ್ಲ. 2018ರ ಪ್ರಣಾಳಿಕೆಯಲ್ಲಿ ರಾಜ್ಯ ಬಿಜೆಪಿ ನೀಡಿದ ಹಲವು ಭರವಸೆಗಳನ್ನು ಈಡೇರಿಸಿಲ್ಲ. ಆದರೆ, ಅವುಗಳ ಬಗ್ಗೆ ಮಾತನಾಡದೇ ನಮ್ಮ ಭರವಸೆಗಳನ್ನು ಜಾರಿಗೆ ತರುವ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುತ್ತಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರ ಪ್ರಣಾಳಿಕೆ ಜಾರಿಗೆ ತರದಿರುವ ಕಾರಣಕ್ಕೆ ಬಿಜೆಪಿಯವರು ರಾಜ್ಯ, ದೇಶದ ಜನರ ಕ್ಷಮೆ ಕೇಳಬೇಕು'' ಎಂದು ಆಗ್ರಹಿಸಿದರು.
''ನಾವು ಕೊಟ್ಟ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಸ್ವಲ್ಪ ಸಮಯಬೇಕು. ಕೆಲವು ದಿನಗಳು ಸಮಯ ನೀಡಿ, ಆ ನಂತರವೂ ಜಾರಿಗೆ ತರದಿದ್ದರೇ, ಬಿಜೆಪಿಯವರು ಪ್ರತಿಭಟನೆ ಮಾಡಬಹುದಿತ್ತು. ಆದರೆ, ಆ ರೀತಿ ಮಾಡದೇ ಅನಗತ್ಯವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ'' ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಪಾಲಿಕೆ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ, ದಾಖಲೆ ಇದ್ದರೆ ತೋರಿಸಲಿ: ಸಚಿವ ಪ್ರಿಯಾಂಕ್ ಖರ್ಗೆ