ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದ ಬಳಿಕ ಶಿವಮೊಗ್ಗದಲ್ಲಿ ವಿಧಿಸಲಾಗಿದ್ದ 144 ಸೆಕ್ಷನ್ ಮುಂದುವರೆದಿದೆ. ಮತ್ತೆ ಇದೀಗ ಡಿಸೆಂಬರ್ 12ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ.
ಡಿಸೆಂಬರ್ 3ರಂದು ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದ ನಂತರ ಎರಡು ಕೋಮುಗಳ ನಡುವೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಡಿ. 3ರಿಂದ 5ರವರೆಗೆ ನಿಷೇಧಾಜ್ಞೆ ಹೊರಡಿಸಿ ಶಿವಮೊಗ್ಗ ತಹಶೀಲ್ದಾರ್ ಆದೇಶ ನೀಡಿದ್ದರು. ನಂತರ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಡಿ. 7ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ನಂತರ ಮತ್ತೆ ಡಿ. 9ರವರೆಗೆ ವಿಸ್ತರಿಸಲಾಗಿತ್ತು.
ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಕೇಸ್: ಶಿವಮೊಗ್ಗದಲ್ಲಿ ಮುಂದುವರೆದ ನಿಷೇಧಾಜ್ಞೆ
ಕೋಟೆ, ತುಂಗಾ ನಗರ, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಅವಕಾಶ ಮಾಡಿಕೊಡುವ ಮೂಲಕ ಮತ್ತೆ ಡಿಸೆಂಬರ್ 12ರ ಬೆಳಗ್ಗೆ 10 ಗಂಟೆಯವರೆಗೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಸೆಕ್ಷನ್ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.