ರಾಮನಗರ: ಫೆ.10ರಂದು ರಾಮನಗರ ತಾಲೂಕಿನ ಜಾಲಮಂಗಲ ಸಮೀಪದ ನಾಗರಕಲ್ಲುದೊಡ್ಡಿ ಬಳಿ ನಡೆದಿದ್ದ, ಜಾಲಮಂಗಲ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ, ರೌಡಿ ಶೀಟರ್ ಶ್ರೀಧರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮನಗರ ತಾಲೂಕಿನ ಜಾಲಮಂಗಲ ನಿವಾಸಿ ಅಭಿಷೇಕ್, ವಿಜಯ್, ತಡಕವಾಗಿಲು ಗ್ರಾಮದ ಮನು, ಚನ್ನೇನಹಳ್ಳಿ ಗ್ರಾಮದ ಹನುಮಾನ್, ಸಿದ್ದಲಿಂಗ ಹಾಗೂ ಮಹೇಶ್ ಬಂಧಿತ ಆರೋಪಿಗಳು. ಈ ಹಿಂದೆ ತನ್ನದೇ ಗ್ರಾಮಪಂಚಾಯಿತಿ ಸದಸ್ಯನೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿದ್ದ ಶ್ರೀಧರ್ ಕೊಲೆಯಾಗಿದ್ದ ಗ್ರಾಮಪಂಚಾಯಿತಿ ಸದಸ್ಯ ಕುಮಾರ್ನ ಮಗನ ಮೇಲೂ ದರ್ಪ ತೋರಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಆ ಗ್ರಾಮ ಪಂಚಾಯಿತಿ ಸದಸ್ಯನ ಮಗ ಆತನನ್ನ ಸಿನಿಮೀಯಾ ರೀತಿಯಲ್ಲಿ ಹತ್ಯೆ ಮಾಡಿದ್ದ.
ಘಟನೆ ನಡೆದದ್ದೇಗೆ?:
ಫೆ.10ರಂದು ಮಧ್ಯಾಹ್ನದ ವೇಳೆ ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ ಹಾಗೂ ಮಧು ಎಂಬುವವರನ್ನ ಇಂಡಿಕಾ ಕಾರಿನಲ್ಲಿ ಬಂದ ಅಭಿಷೇಕ್, ವಿಜಯ್, ಮನು, ಹನುಮಾನ್ ಎಂಬುವವರು ನಾಗರ ಕಲ್ಲುದೊಡ್ಡಿ ಬಳಿ ಕಾರಿನಿಂದ ಬೈಕ್ ಗೆ ಹಿಂಭಾಗದಿಂದ ಗುದ್ದಿಸಿ, ನಂತರ ಬೈಕ್ ನಿಂದ ಬಿದ್ದ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ವೇಳೆ ಬೈಕ್ ನ ಹಿಂಭಾಗದಲ್ಲಿ ಇದ್ದ ಮಧು ಎಂಬಾತ ತಪ್ಪಿಸಿಕೊಂಡಿದ್ದ. ನಂತರ ಕೊಲೆ ಮಾಡಿರುವ ವಿಚಾರವನ್ನ ಗ್ರಾಮದಲ್ಲಿ ಲಾಂಗ್ ತೋರಿಸಿ ಹೇಳಿ ಹೋಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಆರು ಜನ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ ಶೆಟ್ಟಿ ಮಾಹಿತಿ ನೀಡಿದರು.
ತಂದೆಯ ಸಾವಿನ ಸೇಡು ತೀರಿಸಿಕೊಂಡ ಮಗ :
ಶ್ರೀಧರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ನ ತಂದೆ ಕುಮಾರ ಅಲಿಯಾಸ್ ದತ್ತಾತ್ರೇಯ ಎಂಬಾತ ಅದೇ ಜಾಲಮಂಗಲ ಗ್ರಾಮಪಂಚಾಯಿತಿ ಸದಸ್ಯನಾಗಿದ್ದ. ಬೇರೆ ಬೇರೆ ಪಕ್ಷಕ್ಕೆ ಸೇರಿದ್ದ ಶ್ರೀಧರ್ ಹಾಗೂ ಕುಮಾರ್ ನಡುವೆ ಹಲವಾರು ವರ್ಷಗಳಿಂದ ಸಾಕಷ್ಟು ವೈರತ್ವವಿತ್ತು. ಹೀಗಾಗಿ 2016ರಲ್ಲಿ ತನ್ನ ಸಹೋದರರ ಜೊತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತನನ್ನ ಶ್ರೀಧರ್ ಹಾಗೂ ಆತನ ಟೀಂ ಬರ್ಬರವಾಗಿ ಹತ್ಯೆ ಮಾಡಿತ್ತು.
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತ ಶ್ರೀಧರ್ ಜೈಲು ಪಾಲಾಗಿ 2018ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಹೊರ ಬಂದ ಮೇಲೆ ಸುಮ್ಮನಿರದ ಶ್ರೀಧರ್, ಕುಮಾರನ ಮಗನಾದ ಆರೋಪಿ ಅಭಿಷೇಕ್ ಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೇ ಅಭಿಷೇಕ್ ತಾಯಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಜೊತೆಗೆ ಕುಮಾರ್ ಕೊಲೆ ಪ್ರಕರಣದ ಸಾಕ್ಷಿಗಳಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಅಭೀಷೇಕ್ ನನ್ನ ಮನೆಯಿಂದ ಹೊರ ಬಾರದ ರೀತಿಯಲ್ಲಿ ಬೆದರಿಸಿದ್ದ. ಇದರಿಂದ ರೋಸಿ ಹೋಗಿದ್ದ ಅಭಿಷೇಕ್, ಶ್ರೀಧರ್ ನನ್ನ ಹಾಗೆ ಬಿಟ್ಟರೇ ಉಳಿಗಾಲವಿಲ್ಲ ಎಂದು ಒಂದು ತಿಂಗಳುಗಳ ಕಾಲ ಪ್ಲಾನ್ ಮಾಡಿ, ಸ್ನೇಹಿತರ ಸಹಾಯ ಪಡೆದು ಬಾಡಿಗೆಗೆಂದು ಇಂಡಿಕಾ ಕಾರು ಮಾಡಿಕೊಂಡು, ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ನನ್ನ ಹತ್ಯೆ ಮಾಡಿದ್ದರು.