ರಾಮನಗರ : ಕೆಲವು ತಿಂಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ಮಾಡಿ ಜೆಡಿಎಸ್ನಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದಾರೆ. ಹೀಗಾಗಿ, ನಾವು ವಿರೋಧಿಗಳಿಗೆ ಸಂದೇಶ ನೀಡಬೇಕಿದೆ. ನೀವು ಹೆಚ್ಚಿನ ಮತಗಳಿಂದ ನಮ್ಮ ತಂದೆಯನ್ನ ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ಋಣ ನಮ್ಮ ಮೇಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರಕ್ಕೆ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಕಲಾ ತಂಡದೊಂದಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ನಂತರ ಇವರು ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರದಲ್ಲಿ ಹೊಂಗನೂರು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದರು.
ಮಾಜಿ ಸಿಎಂ ಹೆಚ್‌ಡಿಕೆ ಚನ್ನಪಟ್ಟಣದ ಅಭಿವೃದ್ಧಿ ಮಾಡಿದ್ದಾರೆ. ಚನ್ನಪಟ್ಟಣದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ತರುವ ಮೂಲಕ ಶ್ರಮಿಸಿದ್ದಾರೆ. ಕೆಲವರು ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರ ಬಗ್ಗೆ ಚರ್ಚೆ ಮಾಡಲು ಇಲ್ಲಿ ಹೋಗಲ್ಲ. ಲಕ್ಷಾಂತರ ಸಂಖ್ಯೆಯಲ್ಲಿರುವ ಕಾರ್ಯಕರ್ತರೇ ನಮ್ಮ ಬಲ. ಹೆಚ್‌ಡಿಕೆ ಮಾಡಿರುವ ಅಭಿವೃದ್ಧಿ ಜನರ ಹೃದಯದಲ್ಲಿದೆ. ನಮ್ಮ ಅಭಿವೃದ್ಧಿ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯಕ್ಕೆ ಒಳ್ಳೆಯದಲ್ಲ : ಸತ್ತೇಗಾಲ ನೀರಾವರಿ ಯೋಜನೆ ಮೂಲಕ ಶಾಶ್ವತವಾದ ನೀರಾವರಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮೂಲಕ ದಿನದ 24 ಗಂಟೆ ನಿರಂತರ ನೀರು ಪೂರೈಕೆಯಾಗಲಿದೆ. ಕುಮಾರಣ್ಣನ ಈ ಕನಸು ಕೆಲವೇ ತಿಂಗಳಲ್ಲಿ ನನಸಾಗಲಿದ್ದು, ನೀವು ನಮಗೆ ಶಕ್ತಿ ನೀಡಿದ್ದೀರಿ. ನಿಮ್ಮ ಋಣ ತೀರಿಸುತ್ತೇವೆ. ತಾಲೂಕಿನ ಸಮಗ್ರ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬರಲಿದೆ ಎಂದು ವರದಿ ಇದೆ. ಆದರೆ, ಅತಂತ್ರ ಪರಿಸ್ಥಿತಿ ಬರುವುದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದರು.
ಜೆಡಿಎಸ್ ಸ್ವತಂತ್ರವಾಗಿ ಜನ ಬೆಂಬಲ ಗಳಿಸಿ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷ ರೈತ, ಜನಪರ, ಶೋಷಿತ ವರ್ಗದ ಪಕ್ಷವಾಗಿದೆ. ಹೀಗಾಗಿ, ನಾವು ಅಧಿಕಾರಕ್ಕೆ ಬರಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸ ಇದೆ. ನನಗೆ ಪಕ್ಷದ ಯುವ ಘಟಕದ ಜವಾಬ್ದಾರಿ ನೀಡುವ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನಾನೂ ಸಹ ಒತ್ತು ನೀಡುತ್ತೇನೆ ಎಂದರು.
ರಾಮನಗರ, ಚನ್ನಪಟ್ಟಣ ನಮ್ಮ ಎರಡು ಕಣ್ಣುಗಳು ಇದ್ದಂತೆ. ಇಲ್ಲಿನ ಕಾರ್ಯಕರ್ತರು, ಮುಖಂಡರು ಭಯ ಪಡುವ ಅಗತ್ಯವಿಲ್ಲ. ಮಾಜಿ ಸಿಎಂ ಹೆಚ್‌ಡಿಕೆ ಅಭಿವೃದ್ಧಿ ಕಾರ್ಯ ತಿಳಿಸಬೇಕಿದೆ. ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಕೆಲಸವಾಗಬೇಕಿದೆ ಎನ್ನುವ ಮೂಲಕ ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ಟಾಂಗ್ ಕೊಟ್ಟರು.
ಜನರನ್ನ ದಿಕ್ಕು ತಪ್ಪಿಸುವಂತಹ ಕೆಲಸ ಆಗುತ್ತಿದೆ : ಎಷ್ಟು ಬಾರಿ ಇಲ್ಲಿನ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. 20 ವರ್ಷಗಳಿಂದ ಇಲ್ಲಿ ಆಡಳಿತ ನಡೆಸಿದ್ದೀರಿ. ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಇದೀಗ ಚುನಾವಣೆ ಸಮೀಪವಿರುವ ವೇಳೆ ಬಂದಿದ್ದೀರಿ. ಇಲ್ಲಿ ಬಂದು ಗೊಂದಲ ಸೃಷ್ಟಿ ಮಾಡಲು ನೋಡ್ತಾ ಇದ್ದೀರಿ. ಜನರನ್ನು ದಡ್ಡರೆಂದುಕೊಂಡಿದ್ದೀರೋ.. ಅವರಿಗೆ ಕ್ಷೇತ್ರದಲ್ಲಿ ಯಾರು ಅಭಿವೃದ್ಧಿ ಮಾಡಿದ್ದಾರೆಂಬುದು ಚೆನ್ನಾಗಿ ತಿಳಿದಿದೆ. ಯಾರು ಯಾರು ಏನೇನು ಕೆಲಸ ಮಾಡಿದ್ದಾರೆ ಗೊತ್ತಿದೆ. ಜನರನ್ನ ದಿಕ್ಕು ತಪ್ಪಿಸುವಂತಹ ಕೆಲಸ ಆಗುತ್ತಿದೆ. ನಾವು ಏನು ಮಾಡಿದ್ದೀವಿ. ಅವರೇನು ಮಾಡಿದ್ದಾರೆ ಅನ್ನೋದನ್ನ ವಿವರವಾಗಿ ಬಿಡಿಸಿಡೋಣ ಎಂದು ಕರೆ ನೀಡಿದರು.
ಓದಿ: ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ರೈತರ ಭೂ ಪರಿಹಾರ ಸರಳ: ಸಚಿವ ನಿರಾಣಿ