ರಾಮನಗರ : ಸರ್ಕಾರ ಎಷ್ಟೇ ತಡೆದರು ನಾವು ಕೋವಿಡ್ ನಿಯಮಾವಳಿಗಳನ್ನು ಅಳವಡಿಸಿಕೊಂಡು ಪಾದಯಾತ್ರೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕನಕಪುರದ ತಮ್ಮ ನಿವಾಸದಲ್ಲಿ ನಡೆದ ಶಾಸಕಾಂಗ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದೆ.
ಸಾವು ಸಂಭವಿಸುವಂತಹ ಯಾವುದೇ ರೋಗಿಗಳು ಐಸಿಯುನಲ್ಲಿ ದಾಖಲಾಗಿಲ್ಲ. ಸರ್ಕಾರ ಉದ್ದೇಶಪೂರ್ವಕವಾಗಿ ಕಾನೂನು ವಿರೋಧಿ ನಿಲುವುಗಳನ್ನು ತಾಳುತ್ತಿದೆ. ಅನಗತ್ಯ ನಿಯಮ ಹಾಗೂ ನಿರ್ಬಂಧಗಳನ್ನು ರಾಮನಗರಕ್ಕೆ ಹೇರಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿ ಯಾವುದೇ ಆತಂಕಕಾರಿ ಪರಿಸ್ಥಿತಿ ಇಲ್ಲ. ಇದರಿಂದಾಗಿ ನಾವು ಪಾದಯಾತ್ರೆಯನ್ನು ನಡೆಸಲು ತೀರ್ಮಾನಿಸಿದ್ದು, ಸಕಲ ರೀತಿಯ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಮುಂದುವರಿಯುತ್ತೇವೆ. ಸ್ಯಾನಿಟೈಸರ್ ಬಳಕೆ ಜೊತೆಗೆ ಮೂರು ವೈದ್ಯರನ್ನು ಬಳಸುತ್ತಿದ್ದೇವೆ.
ಒಂದುವರೆ ಸಾವಿರ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ಹಳ್ಳಿಯ ಜನರು ಈ ಪಾದಯಾತ್ರೆಯನ್ನು ಸ್ವಾಗತಿಸುತ್ತಿದ್ದಾರೆ. ಎಲ್ಲ ಕಡೆ ನಮ್ಮ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರಕಿದೆ. ನಾವು ಈ ಹಿಂದೆ ನೀಡಿದ ಭರವಸೆಗೆ ಬದ್ಧವಾಗಿದ್ದು, ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ನೀರಿಗಾಗಿ ನಡೆಗೆ ತಡೆಯಲು ಸಾಧ್ಯವಿಲ್ಲ. ನಮ್ಮ ನೀರು ನಮ್ಮ ಹಕ್ಕು. ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಂಡು ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಶಾಂತ ರೀತಿಯಿಂದ ಪಾಲ್ಗೊಂಡು ಇದನ್ನ ಯಶಸ್ವಿಗೊಳಿಸಬೇಕೆಂದು ಪ್ರಾರ್ಥಿಸುತ್ತೇನೆ. ಯಾವುದೇ ರೀತಿಯಲ್ಲಿಯೂ ಸಂಚಾರದಟ್ಟಣೆ ಆಗದ ರೀತಿ ನಡೆದುಕೊಳ್ಳಬೇಕು.
ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿಕೊಂಡು ಪಾದಯಾತ್ರೆ ಪಾಲ್ಗೊಳ್ಳಿ. ಯಾವುದೇ ರೀತಿಯಲ್ಲಿ ನಮ್ಮ ನಡುವಳಿಕೆ ಸರ್ಕಾರಕ್ಕೆ ಪಾದಯಾತ್ರೆಯನ್ನು ತಡೆಯುವ ನಿಟ್ಟಿನಲ್ಲಿ ಸಹಕಾರಿ ಆಗದಿರಲಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಾದಯಾತ್ರೆ ಮಾಡ್ತೇವೆ: ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಳೆದ ಎರಡೂವರೆ ವರ್ಷದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಯೋಜನೆ ಜಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ ಸಚಿವ ಗೋವಿಂದ ಕಾರಜೋಳ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆಯನ್ನ ಪ್ರಾರಂಭ ಮಾಡಿದವರು ನಾವು. ಇಲ್ಲಿ ಬಿಜೆಪಿ ಅವರ ಸಾಧನೆ ಏನಿದೆ? ನಾವು ವಿಸ್ತೃತ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಸಹ ಪಡೆದುಕೊಂಡಿದ್ದೆವು. ಅದರ ಹಸಿರು ನ್ಯಾಯಪೀಠದ ಪರವಾನಗಿ ಪಡೆಯುವಲ್ಲಿ ಬಿಜೆಪಿ ಎಡವಿದೆ. ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ರೀತಿಯ ಆತಂಕ ಅಡ್ಡಿ ಇರಲಿಲ್ಲ. ಸುಪ್ರೀಂ ಕೋರ್ಟ್ ಸಹ ಯೋಜನೆಗೆ ನಾನು ತಡೆಯಾಜ್ಞೆ ನೀಡಲ್ಲ ಎಂದು ತಿಳಿಸಿದೆ. ಯೋಜನೆಗೆ ಯಾವುದೇ ಕಾನೂನು ಸಂಘರ್ಷ ಇಲ್ಲವಾಗಿದೆ. ಬಿಜೆಪಿಯವರು ಯೋಜನೆಯನ್ನು ಜಾರಿಗೆ ತರುವುದರ ಲೋಪವನ್ನು ಮುಚ್ಚಿಕೊಳ್ಳಲು ತಪ್ಪು ಮಾಹಿತಿಯನ್ನು ಜಾಹೀರಾತು ರೂಪದಲ್ಲಿ ನೀಡುತ್ತಿದ್ದಾರೆ. ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವ ಈ ಯೋಜನೆ ಜಾರಿಗೆ ಬರಲೇಬೇಕು. ಇದನ್ನೇ ಆಗ್ರಹಿಸಿ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ಇವರು ತಮ್ಮ ಬಣ್ಣ ಬಯಲಾಗಲಿದೆ ಎಂಬ ಆತಂಕಕ್ಕೆ ತಪ್ಪು ಮುಚ್ಚಿಕೊಳ್ಳಲು ಹೇಗಾದರೂ ಮಾಡಿ ಪಾದಯಾತ್ರೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಪಾದಯಾತ್ರೆ ನಡೆಯುತ್ತದೆ. ತಡೆಯುವ ಸರ್ಕಾರದ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದರು.