ರಾಮನಗರ: ದಿನೆ ದಿನೇ ರಾಜ್ಯದಲ್ಲಿ ಪೆಟ್ರೋಲ್ ದರ ಏರಿಕೆ ಹಿನ್ನೆಲೆ ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ '100 Not Out' ಅಭಿಯಾನದಡಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬಿಡದಿಯ ಹೆಜ್ಜಾಲದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ಬೆಲೆ ಏರಿಕೆ ವಿರುದ್ಧ ಸಾಂಕೇತಿಕವಾಗಿ 5 ಸಾವಿರ ಕಡೆ ಪ್ರತಿಭಟನೆ ಮಾಡುತ್ತೇವೆ. ಪ್ರತಿ ಜಿಲ್ಲೆಗೂ ನಮ್ಮ ನಾಯಕರನ್ನು ನೇಮಿಸಿದ್ದೇನೆ. ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು ಸಾಮಾಜಿಕ ಅಂತರದೊಂದಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಜಿಲ್ಲಾ ಮಟ್ಟದಲ್ಲಿ, 5 ದಿನ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದರು.
ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂಬ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರವರ ಪಕ್ಷ ಏನು ಬೇಕಾದರು ಮಾಡಿಕೊಳ್ಳಲಿ ನಮಗೇನು ಎಂದು ಡಿಕೆಶಿ ಹೇಳಿದರು.
ಜೂ.14 ಬಳಿಕ ಅನ್ಲಾಕ್ ಮಾಡಲು ಸರ್ಕಾರ ನಿರ್ಧಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸರ್ಕಾರ ನಮ್ಮಿಂದ ಯಾವುದೇ ಸಲಹೆ ಕೇಳಿಲ್ಲ. ಅವರೇ ಕೆಲವು ತೀರ್ಮಾನಗಳನ್ನು ಮಾಡುತ್ತಿದ್ದಾರೆ. ವ್ಯಾಕ್ಸಿನೇಷನ್ ಕೊಡಲಿ ಎಂಬುದು ನಮ್ಮ ಸಲಹೆಯಾಗಿತ್ತು. ಚಿಕ್ಕ ಹಾಗೂ ದೊಡ್ಡವರೆಲ್ಲರಿಗೂ ಮೊದಲು ವ್ಯಾಕ್ಸಿನೇಷನ್ ಕೊಡಬೇಕು. ಜೀವ ಕಾಪಾಡಲು ನಿಯಮ ಏನಿದೆಯೋ ಅದನ್ನು ಅನುಸರಿಸಬೇಕು. ಅನ್ಲಾಕ್ ವಿಚಾರದಲ್ಲಿ ಅವರು ತೀರ್ಮಾನ ತೆಗೆದುಕೊಂಡ ಬಳಿಕ ಮಾತನಾಡುತ್ತೇನೆ ಎಂದರು.