ಸಂಗ್ರಹಣಾ ಕೆರೆಯಲ್ಲಿ ನೀರಿನ ಕೊರತೆ: ಆರು ದಿನಕ್ಕೊಮ್ಮೆ ನೀರು ಪೂರೈಕೆ - ನೀರು ಸಂಗ್ರಹಣ ಕೆರೆ
ಲಿಂಗಸುಗೂರು ಪುರಸಭೆ ವಾರ್ಡ್ಗಳಿಗೆ ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ಸಂಗ್ರಹಣೆಗೆ ಕಾಳಾಪುರ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಗೆ ಹೊಂದಿಕೊಂಡು ನೀರು ಸಂಗ್ರಹಣಾ ಕೆರೆಯೊಂದನ್ನು ನಿರ್ಮಿಸಲಾಗಿದೆ. ಈಗ ಮುಖ್ಯ ನಾಲೆ ದುರಸ್ತಿ ನೆಪ ಮುಂದಿಟ್ಟು ಪುರಸಭೆ ಆರು ದಿನಕ್ಕೊಮ್ಮೆ ನೀರು ಪೂರೈಸುವ ತೀರ್ಮಾನ ಮಾಡಿದೆ.

ಲಿಂಗಸುಗೂರು (ರಾಯಚೂರು): ಪುರಸಭೆ ವ್ಯಾಪ್ತಿಯ ವಾರ್ಡ್ಗಳಿಗೆ ನೀರು ಪೂರೈಸುವ ಕುಡಿಯುವ ನೀರು ಸಂಗ್ರಹಣ ಕೆರೆಯಲ್ಲಿ ನೀರಿನ ಕೊರತೆ ಇದ್ದುದರಿಂದ ಮುಂದಿನ ದಿನಗಳಲ್ಲಿ ಆರು ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಲಿಂಗಸುಗೂರು ಪುರಸಭೆ ವಾರ್ಡ್ಗಳಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಸಂಗ್ರಹಣೆಗೆ ಕಾಳಾಪುರ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಗೆ ಹೊಂದಿಕೊಂಡು ನೀರು ಸಂಗ್ರಹಣಾ ಕೆರೆಯೊಂದನ್ನು ನಿರ್ಮಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ, ಕೆರೆ ಹೂಳು ತುಂಬಿರುವ ಕಾರಣವೋ ಇದೀಗ ಸಮಸ್ಯೆ ಎದುರಾಗಿದೆ.
ಆರಂಭದಲ್ಲಿ ನಿತ್ಯ ನೀರು ಪೂರೈಸುತ್ತಿದ್ದ ಪುರಸಭೆ ದಶಕದಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ತೀರ್ಮಾನಿಸಿತ್ತು. ಎರಡು ವರ್ಷದಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಈಗ ಮುಖ್ಯ ನಾಲೆ ದುರಸ್ತಿ ನೆಪ ಮುಂದಿಟ್ಟು ಆರು ದಿನಕ್ಕೊಮ್ಮೆ ನೀರು ಪೂರೈಸುವ ತೀರ್ಮಾನ ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕೆಲಸ ಆರಂಭಗೊಂಡಿದೆ. ಪರಿಪೂರ್ಣ ನೀರು ತುಂಬಿಕೊಳ್ಳಲು ಆಗಿಲ್ಲ. ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆದಿದ್ದು, ಸದ್ಯ ಆರು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಕೆ ಮುತ್ತಪ್ಪ ಮನವಿ ಮಾಡಿದ್ದಾರೆ.