ರಾಯಚೂರು : ಜಿಲ್ಲೆ ಸೇರಿದಂತೆ ಲಿಂಗಸುಗೂರು ತಾಲೂಕಿನಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಂವಹನ ಕೊರತೆಯಿಂದ ಪಡಿತರ ಹಂಚಿಕೆಯಾಗಿಲ್ಲ ಎಂದು ಸಂಘ ಸಂಸ್ಥೆಗಳು ಆರೋಪಿಸಿವೆ.
ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿ ಏಪ್ರಿಲ್ ಕೊನೆ ವಾರದಲ್ಲಿ ಹಂಚಬೇಕಿದ್ದ ಅಕ್ಕಿ, ತೊಗರಿ ಬೇಳೆ ಅಧಿಕಾರಿಗಳ ಶೀತಲ ಸಮರದಿಂದ ಗೋದಾಮಿನಲ್ಲಿ ಇಲಿ, ಹೆಗ್ಗಣಗಳ ಪಾಲಾಗುತ್ತಿದೆ. ಗುಣಮಟ್ಟದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಪ್ರಿಲ್ ತಿಂಗಳಲ್ಲಿ ಕಲಬುರಗಿ ಮೂಲದ ಸುರೇಶ ಇಂಡಸ್ಟ್ರೀಸ್ ಜಿಲ್ಲೆಯ ಪ್ರತಿ ತಾಲೂಕಿಗೆ 915 ಕ್ವಿಂಟಾಲ್ನಂತೆ ಒಟ್ಟು 4,574 ಕ್ವಿಂಟಾಲ್ ಬೇಳೆ ಪೂರೈಸಿದ್ದಾರೆ. ಗುಣಮಟ್ಟ ಪರೀಕ್ಷೆ ನಂತರ ಹಂಚಿಕೆಗೆ ಆಹಾರ ಇಲಾಖೆ ಅಧಿಕಾರಿ ಸೂಚಿಸಿದ್ದು, ಕೆಳಮಟ್ಟದ ಅಧಿಕಾರಿಗಳ ಕೈ ಕಟ್ಟಿ ಹಾಕಿದಂತಾಗಿದೆ.
ಬೇಳೆ ಪೂರೈಕೆ ಗುತ್ತಿಗೆದಾರ ಸುರೇಶ ಸೊಲಂಕಿ ಮಾತನಾಡಿ, ರಾಯಚೂರು ಜಿಲ್ಲೆ ಎಲ್ಲ ತಾಲೂಕು ಕೇಂದ್ರಗಳಿಗೆ 915 ಕ್ವಿಂಟಾಲ್ದಂತೆ ಒಟ್ಟು 4,574 ಕ್ವಿಂಟಾಲ್ ಬೇಳೆ ಪಡೆಯಲಾಗಿದೆ. ಗುಣಮಟ್ಟ ಪರೀಕ್ಷೆ ವರದಿಯೂ ಇದೆ. ಮಾನ್ವಿಯಲ್ಲಿ ಕಳಪೆ ಅಂತ ಕ್ರಿಮಿನಲ್ ಕೇಸ್ ಮಾಡಿಸಿ, ಬೇರೆ ಗುತ್ತಿಗೆದಾರರಿಂದ ಬೇಳೆ ಪೂರೈಕೆ ಯತ್ನ ನಡೆಸಿದ್ದು, ಕೋರ್ಟ್ನಲ್ಲಿ ದಾವೆ ಹೂಡಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪಡಿತರ ಹಂಚಿಕೆ ಆಗಿದೆ. ಇಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಂದ ಹಂಚಿಕೆ ವಿಳಂಬವಾಗಿದೆ. ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಬದಲಾವಣೆ ಮಾಡಲು ಹೋಗಿ ಪಡಿತರ ಬಡವರ, ಸಂಕಷ್ಟದಲ್ಲಿರುವ ಜನರನ್ನು ತಲುಪಿಸುವಲ್ಲಿ ವಿಫಲವಾಗಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಜನರಿಗೆ ನ್ಯಾಯ ಒದಗಿಸುವಂತೆ ಕದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.