ರಾಯಚೂರು: ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ಗಡಿ ಭಾಗದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ಎದುರಾಗಿದೆ.
ಆಂಧ್ರ, ತೆಲಂಗಾಣ ಗಡಿ ಭಾಗಕ್ಕೆ ರಾಯಚೂರು ಜಿಲ್ಲೆ ಹೊಂದಿಕೊಂಡಂತಿದೆ. ಹೀಗಾಗಿ ರಾಜ್ಯ, ಅಂತಾರಾಜ್ಯದ ಜನರ ಓಡಾಟ, ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಆದರೆ, ಇದೀಗ ಕರ್ನೂಲ್, ಗದ್ವಾಲ್ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ. ಹೀಗಾಗಿ ಗಡಿ ಭಾಗದಲ್ಲಿರುವ ಜನರು ರಾಯಚೂರಿಗೆ ಬರುತ್ತಿರುವುದು ಆತಂಕ ಮೂಡಿಸಿದೆ.
ಫಾರ್ಮಾ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಹಾಗೂ ಭತ್ತದ ಲಾರಿಗಳು ಓಡಾಟ ನಡೆಸುತ್ತಿರುವುದರಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ. ರಾಜ್ಯದೊಳಗೆ ಬರದಂತೆ ಚೆಕ್ ಪೋಸ್ಟ್ ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆಂಧ್ರದಿಂದ ಕೆಲ ಬ್ಯಾಂಕ್ ಸಿಬ್ಬಂದಿಗೆ, ಫಾರ್ಮಾ ಕಂಪನಿಗಳಿಗೆ ವಿನಾಯಿತಿ ಇರುವುದರಿಂದ ಕೆಲಸ ಮಾಡಲು ಅವರು ಬರುತ್ತಿದ್ದಾರೆ. ಇನ್ನು ತೆಲಂಗಾಣದಿಂದ ಕಳೆದು ಮೂರ್ನಾಲ್ಕು ದಿನಗಳಿಂದ ರಾತ್ರೋರಾತ್ರಿ ಜನರು ಇಲ್ಲಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಗಮನಹರಿಸಿ ಅವರನ್ನು ಗುರುತಿಸಿ ಕ್ವಾರಂಟೈನ್ನಲ್ಲಿ ಇರಿಸುವ ಕೆಲಸ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.