ರಾಯಚೂರು : ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಮಸ್ಕಿ ತಾಲೂಕು, ಮುದಗಲ್ ಪಟ್ಟಣದ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಮತಯಾಚಿಸಲು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ ಸಿಎಂ ಯಡಿಯೂರಪ್ಪ ಏಪ್ರಿಲ್ 9ರಂದು ಬಂದಿದ್ದರು. ಅದಾದ ಬಳಿಕ ಮುದಗಲ್ ಪಟ್ಟಣದ ಹೊರ ವಲಯದ ಹುನಗುಂದಾ ಶಾಸಕ ದೊಡ್ಡನಗೌಡ ಪಾಟೀಲ್ ಮನೆಯಲ್ಲಿ ವಿಶ್ರಾಂತಿ ಮಾಡಿದ್ದರು.
ಸಂಜೆ ಮಸ್ಕಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಖಾಸಿಂ ಮುರಾರಿಯವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ರು. ಇದಾದ ಬಳಿಕ ಗಚ್ಚಿನ ಮಠಕ್ಕೆ ಭೇಟಿ ನೀಡಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜಕೇಂದ್ರ ಸ್ವಾಮೀಜಿಗಳ ಭೇಟಿ ಮಾಡಿ, ಪುನಾ ಮುದಗಲ್ ಪಟ್ಟಣಕ್ಕೆ ತೆರಳಿ ಮನೆಯಲ್ಲಿ ವಾಸ್ತವ್ಯ ಮಾಡಿದ್ರು.
ಏ.10ರಂದು ಮೂರು ಕಡೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪರ ಪ್ರಚಾರ ನಡೆಸಿದ್ರು. ಸಿಂಧನೂರು ತಾಲೂಕಿನ ತುರುವಿಹಾಳ, ಬಳಗಾನೂರ ಮತ್ತು ಸಂತೆಕಲ್ಲೂರು ಗ್ರಾಮದಲ್ಲಿ ಬಹಿರಂಗ ಸಮಾವೇಶ ನಡೆಸಿದ್ರು. ಏ.10ರಂದು ಮುದಗಲ್ನಲ್ಲಿ ವಾಸ್ತವ್ಯ ಮಾಡಿದ್ರು.
ಏ.11ರಂದು ಮುದಗಲ್ ನಿವಾಸದಲ್ಲಿ ನಾನಾ ಸಮುದಾಯಗಳ ಮುಖಂಡರ ಜೊತೆ ಸಭೆ ನಡೆಸಿದ್ದರು. ಸಭೆಗಳು ಮುಗಿದ ಬಳಿಕ ಮಧ್ಯಾಹ್ನ ಮೆದಿಕಿನಾಳ ಗ್ರಾಮಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತ ದುರುಗಪ್ಪ ಮನೆಯಲ್ಲಿ ಊಟ ಸವಿದರು. ಇಡೀ ದಿನ ಮುದಗಲ್ ಪಟ್ಟಣದಲ್ಲಿ ಸಿಎಂ ವಿವಿಧ ಸಮುದಾಯಗಳ ಸಭೆ ಮುಗಿದ ನಂತರದಲ್ಲಿ ಏ. 12ರಂದು ಬೆಳಗ್ಗೆ ಸಿಎಂ ಬಸವಕಲ್ಯಾಣಕ್ಕೆ ಪ್ರವಾಸ ನಡೆಸಿದ್ರು.
ಈ ವೇಳೆ ಏ.10ರಂದು ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಾಪ್ ಗೌಡ ಪಾಟೀಲ್ಗೆ ಏ.11ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಪ್ರತಾಪ್‌ಗೌಡ ಪಾಟೀಲ್ ನಂತರ ಸುರಪುರ ಶಾಸಕ ರಾಜೂಗೌಡರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಸಮಾವೇಶದಲ್ಲಿ ಸಚಿವರಾದ ಶ್ರೀರಾಮುಲು, ಬಿ. ಸಿ ಪಾಟೀಲ್, ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಸಿ ಸಿ ಪಾಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿ ಟಿ ರವಿ, ವಿಜಯೇಂದ್ರ, ಶಾಸಕರಾದ ರೇಣುಕಾಚಾರ್ಯ, ರಾಜೂಗೌಡ, ಆರ್. ಶಂಕರ್, ಮುನಿರತ್ನ, ಶಿವರಾಜ್ ಪಾಟೀಲ್, ದೊಡ್ಡನಗೌಡ ಪಾಟೀಲ್, ಸಂಸದ ಸಂಗಣ್ಣ ಕರಡಿ ಸೇರಿ ಇನ್ನಿತರು ಭಾಗವಹಿಸಿದ್ದರು. ಅವರೆಲ್ಲರಿಗೂ ಈಗ ಆತಂಕ ಎದುರಾಗಿದೆ.
ಅಷ್ಟೇ ಅಲ್ಲ, ಈ ಎಲ್ಲಾ ನಾಯಕರು ಪ್ರಚಾರದ ವೇಳೆ ನಾನಾ ಗ್ರಾಮಗಳಿಗೆ ಭೇಟಿ ಮಾಡಿ ಪ್ರಚಾರ ನಡೆಸಿದ್ದಾರೆ. ಹಾಗಾಗಿ, ಸಿಎಂ ವಾಸ್ತವ್ಯವಿದ್ದ ಮುದಗಲ್ ಪಟ್ಟಣ ಹಾಗೂ ಮಸ್ಕಿ ತಾಲೂಕಿನ ಜನರಿಗೆ ಕೊರೊನಾ ಆತಂಕ ಶುರುವಾಗಿದೆ.
ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಹಳೇ ದಾಖಲೆ ಉಡಿಸ್, 14 859 ಮಂದಿಗೆ ಸೋಂಕು