ರಾಯಚೂರು : ಕೋವಿಡ್ ಆಸ್ಪತ್ರೆ ಅವ್ಯವಸ್ಥೆ ಹಾಗೂ ಕೃಷಿ ಇಲಾಖೆಯ ಕಾರ್ಯವೈಖರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ, ಕೃಷಿ ಹಾಗೂ ಪ್ರವಾಹ ಕುರಿತಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಡಿಸಿಎಂ ಸವದಿ ಸಭೆ ನಡೆಸಿದರು. ಆರಂಭದಲ್ಲಿ ಜಿಲ್ಲೆಯ ಕೊರೊನಾ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಾದ ಬಳಿಕ ಕೋವಿಡ್ ಆಸ್ಪತ್ರೆಯ ಸೋಂಕಿತರ ಊಟದ ವ್ಯವಸ್ಥೆ ಕುರಿತು ಮಾಹಿತಿ ನೀಡಲು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ತಡಬಡಾಯಿಸಿದರು.
ರೋಗಿಗಳಿಗೆ ನೀಡಬೇಕಾದ ಚಿಕಿತ್ಸೆಯನ್ನ ಸರಿಯಾಗಿ ನೀಡುತ್ತಿಲ್ಲ. ಇದರಿಂದ ಸರ್ಕಾರಿ ಕೋವಿಡ್ ಆಸ್ಪತ್ರೆಗಳಿಗೆ ಸೋಂಕಿತರು ಬರಲು ಹಿಂದೇಟು ಹಾಕುತ್ತಿದ್ದಾರೆ. ಬಂದ ರೋಗಿ ಆಸ್ಪತ್ರೆಯನ್ನು ಕಂಡು ಗುಣಮುಖವಾಗುತ್ತದೆ ಎನ್ನುವ ಭಾವನೆ ಬರಬೇಕು. ಆದರೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದ ರೋಗಿಗಳಿಗೆ ಆತಂಕ ಸೃಷ್ಟಿಯಾಗಿದೆ ಎಂದರು.
ಸಚಿವರು ವಿಷಯ ಪ್ರಸ್ತಾಪಿಸಿದಾಗ ಕೊಠಾರಿ ಕೇಟರಿಂಗ್ ಸಂಸ್ಥೆ ಊಟ ಪೂರೈಕೆ ಮಾಡಲಾಗುತ್ತಿದ್ದ ಮಾಹಿತಿ ಸಭೆಯಲ್ಲಿ ತಿಳಿದು ಬಂದಿದ್ದು, ರೋಗಿಗಳಿಗೆ ಸರಿಯಾಗಿ ಆಹಾರ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.
ಇದೆ ವೇಳೆ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕೋವಿಡ್ ಆಸ್ಪತ್ರೆ ರಾಯಚೂರಿನಲ್ಲಿ ನರಕದಂತೆ ಆಗಿದೆ ಎಂದರು. ಅಲ್ಲದೆ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮುಂಗಾರು ಹಂಗಾಮಿನ ಚರ್ಚೆ
ಇದಾದ ಬಳಿಕ ಕೃಷಿ ಇಲಾಖೆ ಮುಂಗಾರು ಹಂಗಾಮಿನ ಚರ್ಚೆ ನಡೆಯಿತು. ಚರ್ಚೆ ವೇಳೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಸಿಂಧನೂರು ತಾಲೂಕಿಗೆ ಮಂಜೂರಾಗಿದ್ದ ಸುಮಾರು 725 ಟನ್ ರಸಗೊಬ್ಬರ ಪೂರೈಕೆಯಲ್ಲಿ, 100 ಟನ್ ಕಡಿಮೆ ಕಳುಹಿಸಿದ್ದಾರೆ. ಈ ಬಗ್ಗೆ ಕೇಳಿದರೆ, ರಾಯಚೂರಿನಲ್ಲಿ ಪೂರೈಕೆ ಮಾಡಲಾಗಿದೆ ಎನ್ನುವ ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ ಎಂದರು.
ಆಗ ಸಚಿವರು ರಸಗೊಬ್ಬರ ಸಂಗ್ರಹದ ಕುರಿತಂತೆ ಮಾಹಿತಿ ಕೇಳಿದಾಗ, ಸರಕಾರದಿಂದ ಬರುವುದು ಬಾಕಿಯಿದೆ ಎಂದರು. ಆಗ ಗರಂ ಆದ ಸಚಿವರು ಈ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲವೆಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಳಪೆ ರಸಗೊಬ್ಬರ ಪೂರೈಕೆ ಪತ್ತೆ ವಿಚಾರವಾಗಿ ಕೇಳಿದಾಗ ಸಮರ್ಪಕ ಉತ್ತರ ಸಿಗಲಿಲ್ಲ.
ಕೃಷಿ ಇಲಾಖೆ ನಿರ್ಲಕ್ಷ್ಯವೇ ಕಳಪೆ ರಸಗೊಬ್ಬರ ಪೂರೈಕೆಗೆ ಕಾರಣವಾಗಿದೆ. ಬರುವ ದಿನಗಳಲ್ಲಿ ಇಂಥ ಘಟನೆ ಮರುಕಳಿಸದಂತೆ ಹಾಗೂ ಆಗ ಕಳಪೆ ರಸಗೊಬ್ಬರ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದರು.