ರಾಯಚೂರು: ಕೊರೊನಾ ಎರಡನೇ ಅಲೆ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದ ಸೋಂಕಿನ ಪ್ರಮಾಣ ಕಠಿಣ ಕ್ರಮಗಳಿಂದ ಇದೀಗ ಇಳಿಕೆ ಕಂಡಿದೆ.
ಎರಡನೇ ಅಲೆ ಆರಂಭದಲ್ಲಿ ದಿನನಿತ್ಯ ಸೋಂಕಿನ ಪ್ರಮಾಣ ಹೆಚ್ಚಳದೊಂದಿಗೆ ಮೃತರ ಸಂಖ್ಯೆಯೂ ಏರುತ್ತಿತ್ತು. ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡ ಕಠಿಣ ಕ್ರಮಗಳಿಂದ ಇದೀಗ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸೋಂಕು ನಿಯಂತ್ರಿಸಲು ಜಿಲ್ಲೆಯ 817 ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಲಾಗಿತ್ತು. ಪರಿಣಾಮ ಇದೀಗ ಹಂತ ಹಂತವಾಗಿ ಸೋಂಕಿನ ಪ್ರಮಾಣ ಕುಗ್ಗುತ್ತಿದೆ. ಪ್ರಸ್ತುತವಾಗಿ ಜಿಲ್ಲೆಯಲ್ಲಿ ಸೋಮವಾರ 64 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,770 ಸಕ್ರಿಯ ಪ್ರಕರಣಗಳಿವೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್, ಲಾಕ್ಡೌನ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ. ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ 7.8ರಷ್ಟು ಪಾಸಿಟಿವಿ ರೇಟ್ ಬಂದಿದೆ. ಆದರೂ ಕೂಡ ನಾವ್ಯಾರು ಮೈಮರೆಯುವಂತಿಲ್ಲ. ಕೊರೊನಾ ಇಲ್ಲಿಗೆ ಮುಗಿದಿಲ್ಲ. ಹೀಗಾಗಿ, ಜನರು ಕೊರೊನಾ ನಿಯಮ ಪಾಲಿಸಬೇಕು. ಸಂಪೂರ್ಣ ವ್ಯಾಕ್ಸಿನೇಷನ್ ಆದರೆ ಮಾತ್ರ ಕೊರೊನಾ ಹತೋಟಿಗೆ ತರಲು ಸಾಧ್ಯ ಎಂದರು.
ಇದನ್ನೂ ಓದಿ: ಮದ್ಯದಂಗಡಿ ಓಪನ್, ಗೊಬ್ಬರದಂಗಡಿ ಬಂದ್: ಸರ್ಕಾರದ ನಿಯಮದ ವಿರುದ್ಧ ಕಿಡಿಕಾರಿದ ರೈತ