ಮೈಸೂರು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿವಾಳ ಸಮಾಜದವರಿಗೆ ಐರನ್ ಬಾಕ್ಸ್ ಹಾಗೂ ಕುಕ್ಕರ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುವ ವೈರಲ್ ವಿಡಿಯೋ ಕುರಿತು ಮೊದಲ ಬಾರಿಗೆ ಸ್ವತಃ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇಂದು ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರದ ಗ್ರಾಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಯತೀಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. "ಮಾಧ್ಯಮದವರು ಇದನ್ನು ಅನಗತ್ಯವಾಗಿ ಸುದ್ದಿ ಮಾಡುತ್ತಿದ್ದಾರೆ. ನಾನು ನಂಜನಗೂಡಿನ ಮಡಿವಾಳ ಸಮಾಜದ ಕೃತಜ್ಞತಾ ಸಭೆಯಲ್ಲಿ ಮಾತನಾಡುವಾಗ ಸರಿಯಾಗಿ ಅರ್ಥ ಬರುವ ಹಾಗೆ ಮಾತನಾಡದೇ ಇರಬಹುದು. ಆದರೆ, ಆ ಕಾರ್ಯಕ್ರಮದಲ್ಲಿ ತಂದೆಯವರು ಈ ರೀತಿ ಕುಕ್ಕರ್ ಆಗಲಿ, ಐರನ್ ಬಾಕ್ಸ್ ಆಗಲಿ ವಿತರಣೆ ಮಾಡಿದರು ಎಂದು ಹೇಳಿಲ್ಲ. ವಿತರಣೆ ಮಾಡಿದವರು ಮಡಿವಾಳ ಸಂಘದ ರಾಜ್ಯಾಧ್ಯಕ್ಷರು. ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಹಂಚಿಕೆ ಮಾಡಿದ್ದು. ಅವರು ಕೇವಲ ವರುಣಾ ಕ್ಷೇತ್ರಕ್ಕೆ ಮಾತ್ರ ಹಂಚಿಕೆ ಮಾಡಿಲ್ಲ. ಹಾವೇರಿ, ದೇವನಹಳ್ಳಿ, ಯಾದಗಿರಿ ಕ್ಷೇತ್ರಗಳಲ್ಲೂ ಬೇರೆ ಬೇರೆ ಕಡೆ ಹಂಚಿಕೆ ಮಾಡಿದ್ದಾರೆ. ಅದೇ ರೀತಿ ವರುಣಾ ಕ್ಷೇತ್ರಕ್ಕೂ ಹಂಚಿಕೆ ಮಾಡಿದ್ದಾರೆ" ಎಂದು ತಿಳಿಸಿದರು.
''ಈ ಕಾರ್ಯಕ್ರಮಕ್ಕೆ ತಂದೆ (ಸಿದ್ದರಾಮಯ್ಯ)ಯವರನ್ನ ಕರೆದಿದ್ದರು. ಅವರು ಹೋಗಿದ್ದರು. ಆದರೆ, ಸಿದ್ದರಾಮಯ್ಯ ಅವರ ಹಣದಿಂದ ಐರನ್ ಬಾಕ್ಸ್, ಕುಕ್ಕರ್ ವಿತರಿಸಿಲ್ಲ. ನಮ್ಮ ತಂದೆ ಯಾವುದೇ ಹಣ ನೀಡಿಲ್ಲ. ಅದು ಮಡಿವಾಳ ಸಂಘದ ಕಾರ್ಯಕ್ರಮ. ಜತೆಗೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವುದಕ್ಕಿಂತ ಮುಂಚೆಯೇ ಅಂದರೆ ಜನವರಿ 27ರಂದು ನಡೆದ ಕಾರ್ಯಕ್ರಮ. ಈಗ ಅದನ್ನು ರಾಜಕೀಯವಾಗಿ ಬಿಂಬಿಸಲಾಗುತ್ತಿದೆ'' ಎಂದು ಯತೀಂದ್ರ ಹೇಳಿದರು
ಸತ್ಯಕ್ಕೆ ದೂರವಾದ ಮಾತು: ನಮ್ಮ ತಂದೆಯವರು ಕುಕ್ಕರ್ ಮತ್ತು ಐರನ್ ಬಾಕ್ಸ್ ಹಂಚಿಕೆ ಮಾಡಿದರು ಎಂಬುದು ಸತ್ಯಕ್ಕೆ ದೂರವಾದ ಮಾತು. ನಾನು ಹೇಳಿರುವುದೇ ಬೇರೆ. ಅವರು ಬೇರೆ ರೀತಿ ಬಿಂಬಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಸ್ವಂತ ದುಡ್ಡು ಖರ್ಚು ಮಾಡಿ, ವೋಟಿಗೋಸ್ಕರ ಐರನ್ ಬಾಕ್ಸ್, ಕುಕ್ಕರ್ ಹಂಚಿದ್ದಾರೆ ಎಂದು ನಾನು ಹೇಳಿಲ್ಲ. ರಾಜ್ಯ ಮಡಿವಾಳ ಸಂಘದ ಕಾರ್ಯಕ್ರಮಕ್ಕೆ ತಂದೆ ಹೋಗಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಕುಕ್ಕರ್ ವಿತರಿಸಿಲ್ಲ. ಇದನ್ನು ಸುಮ್ಮನೆ ಮಾಧ್ಯಮದವರು ಬಿಂಬಿಸುತ್ತಿದ್ದಾರೆ. ಯಾವತ್ತೂ ತಂದೆಯವರು ವೋಟಿಗೋಸ್ಕರ ಕುಕ್ಕರ್ ಕೊಡುವ, ಸೀರೆ ಹಂಚುವ ಕೆಲಸ ಮಾಡುವುದಿಲ್ಲ" ಎಂದು ವೈರಲ್ ವಿಡಿಯೋ ವಿವಾದದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕೆ ಎಸ್ ಈಶ್ವರಪ್ಪ ಗಂಭೀರ ಆರೋಪ