ಮೈಸೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ನ್ಯಾಯಾಲಯಕ್ಕೆ ಕಳುಹಿಸಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವರ್ತಕರಿಗೆ ಎಚ್ಚರಿಕೆ ನೀಡಿದ್ದಾರೆ.
ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸುತ್ತಿವೆ ಎಂಬ ವರ್ತಕರ ಹೇಳಿಕೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವರ್ತಕರು ಸರ್ಕಾರದ ಆದೇಶ ಉಲ್ಲಂಘನೆ ಮಾಡಬಾರದು. ಉಲ್ಲಂಘನೆ ಮಾಡಿದರೆ ಕಾನೂನಾತ್ಮಕ ಕ್ರಮ ಅನಿವಾರ್ಯ, ಅಲ್ಲದೇ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ನ್ಯಾಯಾಲಯಕ್ಕೆ ಕಳುಹಿಸಲಾಗುವುದು. ಇದಕ್ಕೆ ಅವಕಾಶ ಮಾಡಿಕೊಳ್ಳಬೇಡಿ ಎಂದು ಹೇಳಿದರು.
ಸಾಂಕ್ರಮಿಕ ರೋಗ ಹರಡದಂತೆ ಕ್ರಮಕೈಗೊಳ್ಳುವ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಯಾರಿಗೂ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಈ ತರಹ ಮಾಡಿಲ್ಲ. ವರ್ತಕರು ತಾಳ್ಮೆವಹಿಸಿದರೆ ಅವರಿಗೆ ಅನುಕೂಲವಾಗಲಿದೆ ಎಂದರು.
ಓದಿ: ಸುಮಲತಾಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ.. ಅವರ ಯೋಜನೆ ತುಘಲಕ್ ಸಂಸ್ಕೃತಿ ರೀತಿ ಇದೆ.. ರವೀಂದ್ರ ಶ್ರೀಕಂಠಯ್ಯ
ವೀಕೆಂಡ್ ಕರ್ಫ್ಯೂ ಬೇಡವೆಂದು ಸಚಿವರಿಗೆ ಮನವಿ:
ಇಂದು ಖಾಸಗಿ ಹೋಟೆಲ್ನಲ್ಲಿ ಟೂರಿಸ್ಟ್ ಅಂಡ್ ಟ್ರಾವೆಲ್ ಅಸೋಸಿಯೇಷನ್ ಹಾಗೂ ಹೋಟೆಲ್ ಅಸೋಸಿಯೇಷನ್ , ಇತರ ವ್ಯಾಪಾರಿ ಸಂಘಗಳ ಸದಸ್ಯರು ಸಭೆ ನಡೆಸಿದರು.
ಮೈಸೂರು ಪ್ರವಾಸಿಗರ ತಾಣವಾಗಿದ್ದು, ಇಲ್ಲಿಗೆ ವೀಕೆಂಡ್ನಲ್ಲೇ ಹೆಚ್ಚು ಜನ ಬರುವುದರಿಂದ ಇವರನ್ನು ನಂಬಿ ಇಲ್ಲಿನ ಹೋಟೆಲ್ಗಳು, ಟ್ರಾವೆಲ್ಸ್ಗಳು ಜೀವನ ನಡೆಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಎಲ್ಲ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭದಲ್ಲಿ ವೀಕೆಂಡ್ ಕರ್ಫ್ಯೂ ಮಾಡಿದರೆ ತುಂಬಾ ಕಷ್ಟವಾಗುತ್ತದೆ. ಗಡಿ ಭಾಗದಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಿ, ಮೈಸೂರು ನಗರದಲ್ಲಿ ವೀಕೆಂಡ್ ಕರ್ಫ್ಯೂ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ಗೆ ಮನವಿ ಸಲ್ಲಿಸಿದರು.