ಮೈಸೂರು: ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನ ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಡಿ.ಕೆ .ಶಿವಕುಮಾರ್ ಪ್ರಯತ್ನಿಸುತ್ತಿದ್ದರೆ, ಡಿ.ಕೆ.ಶಿಯನ್ನು ಇಳಿಸಬೇಕು ಎಂದು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರವನ್ನು ಮರೆಮಾಚುವ ಸಲುವಾಗಿ ಸಿದ್ದರಾಮಯ್ಯ ಅವರು ಸಿಎಂ ಬದಲಾವಣೆಯಾಗುತ್ತಾರೆ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿನ ಮೆಡಿಕಲ್ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಯಾಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಈಗ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಅಸಮಾಧಾನ ಉಂಟಾಗಿದೆ. ಡಿಕೆಶಿ ಅವರನ್ನ ತೆಗಿಯಬೇಕು ಎಂದು ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯರನ್ನು ತೆಗಿಯಬೇಕು ಎಂದು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರ ಜನರಿಂದ ಮರೆಮಾಚಲು ಇಂತಹ ಹೇಳಿಕೆಯನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ನಮ್ಮ ಪಕ್ಷ ಮತ್ತು ನಾವು ತೀರ್ಮಾನ ಮಾಡುತ್ತೇವೆ, ಅವರಿಗೆ ನಮ್ಮ ಉಸಾಬರಿ ಬೇಡ, ಬದಲಾಗಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಆರ್.ಆರ್.ನಗರ ಮತ್ತು ಶಿರಾ ಎರಡು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆರ್.ಆರ್.ಕ್ಷೇತ್ರ ನನ್ನ ಪಕ್ಕದ ಕ್ಷೇತ್ರ, ನಾನು 10 ದಿನ ಆ ಕ್ಷೇತ್ರದಲ್ಲೇ ಇನ್ ಚಾರ್ಜ್ ಆಗಿದ್ದು, ಕೆಲಸ ಮಾಡಿದ್ದೇನೆ. ಮುನಿರತ್ನ ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಭಾವನೆ ಜನರಲ್ಲಿ ಇದೆ. ಶೇ.50 ಜನ ವ್ಯಕ್ತಿ ನೋಡಿ ಮತಹಾಕಿದರೆ, ಶೇ.50 ಪಕ್ಷ ನೋಡಿ ಮತ ಹಾಕುತ್ತಾರೆ. ಆ ಕ್ಷೇತ್ರದಲ್ಲಿ ಮುನಿರತ್ನ ಗೆಲುವು ನಿಶ್ಚಿತ. ಶಿರಾ ಕ್ಷೇತ್ರದ ಸಮೀಕ್ಷೆಯ ಪ್ರಕಾರವೂ ಸಹ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ಸಿಎಂ ಗೆ ಬಿಟ್ಟ ವಿಚಾರ, ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಎಮ್.ಟಿ.ಬಿ, ವಿಶ್ವನಾಥ್, ಶಂಕರ್ಗೆ ಒಂದು ಸ್ಥಾನ ಕೊಡಿ ಎಂದು ಕೇಳಬಹುದು ಅಷ್ಟೇ ಹೊರತು ಇದರ ಸಂಪೂರ್ಣ ಪರಮಾಧಿಕಾರ ಸಿಎಂ ಯಡಿಯೂರಪ್ಪ ಅವರದ್ದೇ ಎಂದರು.
ಇನ್ನು ಮೆಡಿಕಲ್ ಕಾಲೇಜಿನ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡದ ಹಲವಾರು ಭಾಗಗಳು ಬೀಳತೊಡಗಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.