ಮೈಸೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದದ ಆಟ ನಡೆಯಲ್ಲ. ಏನೇ ಒಪ್ಪಂದ ಮಾಡಿಕೊಂಡರೂ ಜೆಡಿಎಸ್ ಸೋಲಿಸಲು ಕಾರ್ಯಕರ್ತರು ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಸಂಕಲ್ಪ ತೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಲಿಂಗದೇವರು ಕೊಪ್ಪಲಿನ ಬಳಿ ಆಯೋಜಿಸಿದ್ದ ಸ್ವಾಭಿಮಾನಿ ಪಡೆ ಕಾಂಗ್ರೆಸ್ ಸೇರ್ಪಡೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2008ರಲ್ಲಿ ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಬಾರದೆಂದು ಯಾರು ಹೇಳಲಿಲ್ಲ. ನನ್ನ ಊರು ವರುಣ ಕ್ಷೇತ್ರಕ್ಕೆ ಸೇರಿದ್ದರಿಂದ ಅಲ್ಲಿ ಕಣಕ್ಕಿಳಿದೆ. ನಂತರ, ಹತ್ತು ವರ್ಷಗಳ ಕಾಲ ಸಂಪರ್ಕ ದೂರವಾಗಿದ್ದರಿಂದ ಚುನಾವಣೆಯಲ್ಲಿ ವ್ಯತ್ಯಾಸವಾಯಿತು. ಆದರೆ, ಈ ಬಾರಿ ಕಾಂಗ್ರೆಸ್ ಗೆಲ್ಲಿಸಲು ಮತದಾರರು ಮನಸ್ಸು ಮಾಡಿದ್ದಾರೆ. ಕ್ಷೇತ್ರದ ಜನರು ಐದು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಮೂರು ಬಾರಿ ಸೋಲಿಸಿದ್ದಾರೆ. ಈವರೆಗೆ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ.
ರಾಜಕೀಯವಾಗಿ ನನಗೆ ಶಕ್ತಿ ನೀಡಿದ ಕ್ಷೇತ್ರ ಚಾಮುಂಡೇಶ್ವರಿ ಮತ್ತು ನನ್ನ ತಾಲೂಕು ಆಗಿದೆ. ಹಾಗಾಗಿಯೇ ಇಂದಿಗೂ ಈ ಕ್ಷೇತ್ರ ನನಗೆ ಅಚ್ಚುಮೆಚ್ಚು. ಕಳೆದ ಬಾರಿ ನನ್ನ ವಿರುದ್ದ ಒಕ್ಕಲಿಗ, ಲಿಂಗಾಯತರ ವಿರೋಧಿ ಎನ್ನುವಂತೆ ಅಪಪ್ರಚಾರ ಮಾಡಿದರು. ಆದರೆ, ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಬಡವರಿಗೆ ಅನುಕೂಲ ಆಗುವ ರೀತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ್ದನ್ನು ಮನಗಾಣಬೇಕು ಎಂದು ಇದೇ ವೇಳೆ ನುಡಿದರು.
ಪರಸ್ಪರ ಕಾಲೆಳೆಯುವುದು ಬೇಡ: ಕಾಂಗ್ರೆಸ್ನಲ್ಲಿ ಒಗ್ಗೂಡಿ ಹೋರಾಟ ಮಾಡಿದರೆ ಗೆದ್ದೇ ಗೆಲ್ಲುತ್ತೇವೆ. ಒಬ್ಬರಿಗೊಬ್ಬರು ಕಾಲೆಳೆಯುವುದಕ್ಕೆ ಅವಕಾಶ ಕೊಡಬಾರದು. ಇದರಿಂದಾಗಿ ಸೋಲುಂಟಾಗುತ್ತದೆ. ಹಾಗಾಗಿ, ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಿ. ಪಟಾಕಿ ಸಿಡಿಸುವುದು, ಹಾರ ಹಾಕುವುದು, ಶಿಳ್ಳೆ ಹಾಕುವುದಲ್ಲ. ನಮಗೆ ಏನಾದರೂ ನಿಜವಾದ ಗೌರವ ಕೊಡಬೇಕು ಎನ್ನುವ ಮನಸ್ಸು ಇದ್ದರೆ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ, ಜನರಲ್ಲಿ ಮನವಿ ಮಾಡಿದರು.
ಸ್ಪರ್ಧೆ ಮಾಡಲು ಆಕಾಂಕ್ಷಿಗಳಾಗಿ ಹನ್ನೊಂದು ಜನರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡಲಾಗದು. ಗೆಲ್ಲುವ ವ್ಯಕ್ತಿಗೆ ಗಮನದಲ್ಲಿಟ್ಟುಕೊಂಡು ಟಿಕೆಟ್ ಕೊಡಲಾಗುವುದು. ಹಾಗಾಗಿ, ಒಬ್ಬರಿಗೊಬ್ಬರು ತನಗೆ ಟಿಕೆಟ್ ಸಿಗಲಿಲ್ಲ ಅಂದುಕೊಳ್ಳದೇ ಕೆಲಸ ಮಾಡಬೇಕು. ಕಾಂಗ್ರೆಸ್ಗೆ ಕಾಂಗ್ರೆಸ್ ಶತ್ರುವಾಗಬಾರದು ಇದನ್ನು ಗಮನದಲ್ಲಿಟ್ಟು ಕೆಲಸ ಮಾಡಬೇಕು ಎಂದರು.
ಜೆಡಿಎಸ್ 20 ಸ್ಥಾನ ಗೆಲ್ಲಲ್ಲ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಏಳೆಂಟು ಜಿಲ್ಲೆಗಳಲ್ಲಿ ಶಕ್ತಿ ಹೊಂದಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಇಪ್ಪತ್ತು ಸ್ಥಾನ ಗೆಲ್ಲುವುದು ಕಷ್ಟ. ಹಾಗಾಗಿಯೇ ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಜೆಡಿಎಸ್ ಯಾವಾಗಲೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ನಾನು ಸಂಸ್ಥಾಪಕ ಅಧ್ಯಕ್ಷನಾಗಿ ಮತ್ತು ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಗಲೂ ಅವಕಾಶ ದೊರೆತಿಲ್ಲ. ನಾನಾಗಿಯೇ ಪಕ್ಷ ಬಿಡಲಿಲ್ಲ. 2006ರಲ್ಲಿ ಪಕ್ಷದಿಂದ ಹೊರ ಹಾಕಿದರು.
ಅಹಿಂದ ಸಮಾವೇಶ ಮಾಡಿದರೆಂಬ ಕಾರಣಕ್ಕಾಗಿ ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದರಿಂದ ಕಾಂಗ್ರೆಸ್ ಸೇರಬೇಕಾಯಿತು. 2004ರಲ್ಲಿ 59, 2008ರಲ್ಲಿ 27, 2013ರಲ್ಲಿ 27, 2018ರಲ್ಲಿ 37 ಸ್ಥಾನ ಗೆದ್ದಿತು. ಆದರೆ, ಈಗ 20 ಸ್ಥಾನ ಗೆಲ್ಲುವುದು ಹೆಚ್ಚು. ಹೆಚ್.ಡಿ.ಕುಮಾರಸ್ವಾಮಿ ಹೇಳುವ ಮಾತಿನಂತೆ 120 ಸ್ಥಾನ ಬರುವುದು ಅಸಾಧ್ಯ ಎಂದು ಇದೇ ವೇಳೆ ಜೆಡಿಎಸ್ ವಿರುದ್ದ ಚಾಟಿ ಬೀಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕರಾದ ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: ಬಿಜೆಪಿ ಪ್ರಮುಖರ ಸಭೆಗೆ ಬಿಎಸ್ವೈಗಿಲ್ಲ ಆಹ್ವಾನ : ಪ್ರಾಥಮಿಕ ಸಭೆಯಾಗಿದ್ದಕ್ಕೆ ಕರೆದಿಲ್ಲ ಎಂದು ಸಿಎಂ ಸಷ್ಪನೆ