ಮೈಸೂರು : ಸರಗಳ್ಳತನ ಮತ್ತು ದ್ವಿಚಕ್ರ ವಾಹನಗಳ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 14.10 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.
ಕೆ ಆರ್ ಠಾಣೆಯಲ್ಲಿ ಮಾತನಾಡಿದ ಅವರು, ಮಂಡಿ ಮೊಹಲ್ಲಾದ ಮಹ್ಮದ್ ಫರಾಜ್(28), ಬೆಂಗಳೂರಿನ ಕೆಜಿಹಳ್ಳಿಯ ಅರ್ಬಾಜ್ ಖಾನ್(24), ಬೆಂಗಳೂರಿನ ಸದ್ದಾಂನಗರದ ಜಿಬ್ರಾನ್ ಖಾನ್(19), ಹುಣಸೂರಿನ ಶಬೀರ್ ನಗರದ ಇಮ್ರಾನ್ ಖಾನ್(21) ಬಂಧಿತರು ಎಂದು ತಿಳಿಸಿದರು.
ಚಾಮುಂಡಿಬೆಟ್ಟದ ಮುಖ್ಯರಸ್ತೆಯ ಉತ್ತನಹಳ್ಳಿ ಕಡೆಗೆ ಹೋಗುವ ಜಂಕ್ಷನ್ ಬಳಿ ನಾಲ್ವರು ನಿಂತಿದ್ದ ವೇಳೆ ಗಸ್ತು ತಿರುಗುವ ಪೊಲೀಸ್ ವಾಹನ ಕಂಡು ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆ ಆರ್ ಠಾಣೆ ವ್ಯಾಪ್ತಿಯಲ್ಲಿ 4 ಸರಗಳ್ಳತನ, ವಿದ್ಯಾರಣ್ಯಪುರಂ ಹಾಗೂ ಕುವೆಂಪುನಗರ ಠಾಣೆಯಲ್ಲಿ ತಲಾ ಒಂದೊಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆ ಆರ್ ಠಾಣೆ 4 ಬೈಕ್, ಉಪ್ಪಾರಪೇಟೆ 2 ಬೈಕ್, ಪೀಣ್ಯಾ, ಮಹಾಲಕ್ಷ್ಮಿಲೇಔಟ್ ಠಾಣೆಯ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳಲ್ಲಿ ಇವರು ಪ್ರಮುಖ ಆರೋಪಿಗಳಾಗಿದ್ದಾರೆ ಎಂದರು.
ಈ ನಾಲ್ವರ ಪೈಕಿ ಮಹ್ಮದ್ ಫರಾಜ್ ಎಂಬಾತನ ಮೇಲೆ ಮೈಸೂರಿನ ವಿವಿಧ ಠಾಣೆಯಲ್ಲಿ 50 ಪ್ರಕರಣ ದಾಖಲಾಗಿವೆ. ಬಳಿಕ ಜಾಮೀನು ಪಡೆದು ಬಂದ ನಂತರ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಇದೀಗ ಈತನಿಗೆ ಜಾಮೀನು ನೀಡದಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.