ಮೈಸೂರು: ಮೊಬೈಲ್ ಖರೀದಿಸಲು ಹಣ ಸಿಗದಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ಇಲ್ಲಿನ ಇಲವಾಲ ಹೋಬಳಿಯ ಚಿಕ್ಕನಹಳ್ಳಿಯಲ್ಲಿ ನಡೆದಿದೆ.
ಚಿಕ್ಕನಹಳ್ಳಿ ಗ್ರಾಮದ ವಿದ್ಯಾರ್ಥಿ ನಾಗೇಶ್ (16) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತ ಇಲವಾಲದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ನಾಗೇಶ್ ಪೋಷಕರು ಮೊಬೈಲ್ ಕೊಡಿಸಿದ್ದರು. ಆದರೆ ಮೊಬೈಲ್ ಕಳೆದುಹೋಗಿತ್ತು. ಇದರ ನಡುವೆ ಕಡಿಮೆ ಬೆಲೆಗೆ ಐಫೋನ್ ನೀಡುವುದಾಗಿ ನಾಗೇಶನಿಗೆ ಕರೆಯೊಂದು ಬಂದಿತ್ತು. ಹಾಗಾಗಿ ಹಣ ನೀಡುವಂತೆ ಪೋಷಕರನ್ನು ಕೇಳಿದ್ದ. ಆದರೆ ಪೋಷಕರು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಫೆಬ್ರವರಿ 24 ರಂದು ಕಾಲೇಜಿಗೆ ತೆರಳಿದ್ದ ನಾಗೇಶ್ ಮನೆಗೆ ವಾಪಸ್ ಬಂದಿರಲಿಲ್ಲ.
ಇದನ್ನೂ ಓದಿ: ಮಂಗಳೂರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಮೂವರು ದಲ್ಲಾಳಿಗಳ ಬಂಧನ, ನಾಲ್ವರು ಯುವತಿಯರ ರಕ್ಷಣೆ
ಈ ಸಂಬಂಧ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ನಿನ್ನೆ (ಮಂಗಳವಾರ) ಕೆರೆಯಲ್ಲಿ ನಾಗೇಶನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಖರೀದಿಸಲು ಹಣ ಸಿಗದಿದ್ದಕ್ಕೆ ಬೇಸರಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.