ಮೈಸೂರು: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವೂ ಒಂದು. ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಹೆಸರಿನ ಕ್ಷೇತ್ರವೂ ಆಗಿದ್ದು ರಾಜಕೀಯ ಲೆಕ್ಕಾಚಾರ ತುಸು ಹೆಚ್ಚು. ಅಲ್ಲದೇ ಇದು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ವಿಧಾನಸಭಾ ಕ್ಷೇತ್ರ ಕೂಡ ಹೌದು. ನಗರ ಮತ್ತು ಗ್ರಾಮೀಣ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರ ಆಗಿದ್ದು ತುರುಸಿನ ರಾಜಕೀಯವೇ ಇಲ್ಲಿ ಅಧಿಕ. ಸದ್ಯ ಚುನಾವಣೆ ಸಮೀಪಿಸುತ್ತಿದ್ದು ಸಿದ್ಧತೆ, ಇಲ್ಲಿಯವರೆಗೆ ಗೆದ್ದ ಅಭ್ಯರ್ಥಿಗಳ ಮಾಹಿತಿ, ಜಾತಿವಾರು ಲೆಕ್ಕಾಚಾರ, ಮೂರು ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು ಹಾಗು ಕ್ಷೇತ್ರದ ಜ್ವಲಂತ ಸಮಸ್ಯೆಗಳು ಹೇಗಿವೆ ನೋಡೋಣ.
ಚಾಮುಂಡಿ ಬೆಟ್ಟ ಈ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಈ ಕ್ಷೇತ್ರಕ್ಕೆ ಚಾಮುಂಡೇಶ್ವರಿ ಎಂಬ ಹೆಸರು ಬಂದಿದೆ. 2008ರ ಕ್ಷೇತ್ರ ಪುನರ್ ವಿಂಗಡಣೆಗಿಂತ ಮೊದಲು ಇಡೀ ಮೈಸೂರು ತಾಲೂಕು ಮತ್ತು ನಗರದ ಕೆಲವು ವಾರ್ಡ್ಗಳು ಈ ಕ್ಷೇತ್ರ ಸೇರುತ್ತಿದ್ದವು. ಆದರೆ, ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ಸಮಿತಿ ವರದಿಯಂತೆ ವರುಣಾ ಹೋಬಳಿಯನ್ನು ಪ್ರತ್ಯೇಕಿಸಿ ಟಿ.ನರಸೀಪರ ಹಾಗೂ ವರುಣಾದ ಭಾಗಶಃ ಪ್ರದೇಶಗಳನ್ನು ಒಟ್ಟುಗೂಡಿಸಿ ವರುಣಾ ಕ್ಷೇತ್ರ ರಚಿಸಲಾಯಿತು.
ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿ 5 ಬಾರಿ ಗೆದ್ದು, 2 ಬಾರಿ ಸೋತಿದ್ದಾರೆ. ವರುಣಾದಿಂದ ಅವರು ಸತತ 2 ಬಾರಿಯೂ ಗೆದ್ದಿದ್ದು ಇತಿಹಾಸ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರನ್ನು ಹಾಲಿ ಶಾಸಕ ಜಿ.ಟಿ.ದೇವೇಗೌಡ ಭಾರಿ ಅಂತರದಲ್ಲಿ ಸೋಲಿಸಿದ್ದು ಇಡೀ ರಾಜ್ಯದ ಗಮನ ಸೆಳೆದಿತ್ತು. ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳುವುದರ ಜತೆಗೆ ಜಿಲ್ಲೆಯಲ್ಲಿ ಜಿಟಿಡಿ ಹಾಗೂ ಪುತ್ರ ಹರೀಶ್ ಗೌಡ ವರ್ಚಸ್ಸಿಗೆ ಕಡಿವಾಣ ಹಾಕಲು ಪಣತೊಟ್ಟಿರುವ ಸಿದ್ದರಾಮಯ್ಯ, ಕ್ಷೇತ್ರದ ತಳಮಟ್ಟದಲ್ಲೂ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಆ ಮೂಲಕ ಅಂತಿಮವಾಗಿ ಜಿಟಿಡಿ ಸೋಲಿಸಿಯೇ ತೀರಬಲ್ಲ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಹಾಗಾಗಿ ಕಾಂಗ್ರೆಸ್ನಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಆಕಾಂಕ್ಷಿತರ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.
ಕ್ಷೇತ್ರಕ್ಕಾಗಿ ಆಕಾಂಕ್ಷಿಗಳ ಪೈಪೋಟಿ: ಸಿದ್ದರಾಮಯ್ಯನವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ ಬಳಿಕ ಹರಿದು ಹಂಚಿಹೋಗಿದ್ದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಜಿ.ಪಂ.ಮಾಜಿ ಅಧ್ಯಕ್ಷ ಕೆ.ಮರಿಗೌಡ ಪ್ರಾರಂಭದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಜಿಟಿಡಿ ಸೋಲಿಸಲು ಮತ್ತೋರ್ವ ಒಕ್ಕಲಿಗ ನಾಯಕನೇ ಆಗಬೇಕೆಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿತ್ತು. ಆಗ ಮೈಸೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್ ಹೆಸರು ಮುನ್ನಲೆಗೆ ಬಂದಿದೆ. ಇವರೊಟ್ಟಿಗೆ ಸುಮಿತ್ರ ಸ್ಟಿಲ್ಸ್‌ನ ಮಾಲೀಕರಾದ ಕೃಷ್ಣಕುಮಾರ್ ಸಾಗರ್, ಲೇಖಾ ವೆಂಕಟೇಶ್, ನರಸೇಗೌಡ, ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಉಮಾಶಂಕರ್ ಸಹ ಹೆಸರೂ ಕೇಳಿ ಬರುತ್ತಿದೆ. ಕ್ಷೇತ್ರಕ್ಕೆ ಹೊರಗಿನ ಹೊಸ ಅಭ್ಯರ್ಥಿಗಳನ್ನು ಕರೆತರಬೇಕೆಂಬ ಚರ್ಚೆಯೂ ಇದ್ದು, ಕ್ಷೇತ್ರದ ಕೈ ಶಾಸಕರಾಗಿದ್ದ ಸತ್ಯಪ್ಪ ಅವರ ಪುತ್ರ, ಜಿ.ಪಂ.ಸದಸ್ಯರಾಗಿದ್ದ ಅರುಣ್ ಕುಮಾರ್ ಸಹ ಆಕಾಂಕ್ಷಿಗಳಲ್ಲಿ ಒಬ್ಬರು.
ಅಭ್ಯರ್ಥಿಗಳ ಘೋಷಣೆಯೇ ಆಗಿಲ್ಲ: ಜಿಟಿಡಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಕ್ಷೇತ್ರದ ಕೆಲವು ಜೆಡಿಎಸ್ ನಾಯಕರು ಅವರ ವಿರುದ್ಧ ಬಂಡಾಯವೆದ್ದಿದ್ದು ಇತ್ತೀಚಿನ ರಾಜಕೀಯದ ಹೊಸ ವಿದ್ಯಮಾನ. ಅದರಲ್ಲೂ ಜಯಪುರ ಹೋಬಳಿ ಪ್ರಮುಖ ಒಕ್ಕಲಿಗ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ, ಕುರುಬ ಸಮುದಾಯದ ಮುಖಂಡ ಬೀರಿಹುಂಡಿ ಬಸವಣ್ಣ ಹಾಗೂ ಯರಗನಹಳ್ಳಿ ಮಾದೇಗೌಡ, ಬೆಳವಾಡಿ ಶಿವಮೂರ್ತಿ, ಕೃಷ್ಣನಾಯಕ ಈಗಾಗಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಥಳೀಯ ಹಾಲಿ ಶಾಸಕ ಜಿ.ಟಿ.ದೇವೆಗೌಡರ ವಿರುದ್ಧ ತೊಡೆತಟ್ಟಿ ಕಾಂಗ್ರೆಸ್ ಸೇರಿದ್ದಾರೆ. ಸದ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಜಿ.ಟಿ. ದೇವೇಗೌಡರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ, ಇವರಿಗೆ ಪೈಪೋಟಿ ನೀಡಲು ಮುಂದಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಈವರೆಗೂ ತಮ್ಮ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಒಕ್ಕಲಿಗರದ್ದೆೇ ಪ್ರಾಬಲ್ಯ: ಕ್ಷೇತ್ರದಲ್ಲಿ ಮೂರು ಪಕ್ಷದಿಂದ ಬಹುತೇಕ ಒಕ್ಕಲಿಗರನ್ನೇ ಕಣಕ್ಕಿಳಿಸಿದರಷ್ಟೇ ಜಿದ್ದಾಜಿದ್ದಿ ನಡೆಯಲಿದೆ ಎಂಬ ಮಾತಿದೆ. ಅದರಂತೆ ಆದರೆ ಇತರೆ ಸಮುದಾಯದ ಮತಗಳು ನಿರ್ಣಾಯಕ ಆಗಲಿವೆ. ಈ ಕಾರಣಕ್ಕಾಗಿ, ಈ ಕ್ಷೇತ್ರದ ಮೇಲೆ ಇತರೆ ಸಮುದಾಯದ ನಾಯಕರ ಪ್ರಭಾವ ಹೆಚ್ಚಾಗಿ ಪರಿಣಾಮ ಬೀರಲಿದೆ.
ಅತಿ ಹೆಚ್ಚು ಮತದಾರರಿರುವ ಉದ್ಬೂರು, ರಮ್ಮನಹಳ್ಳಿಯಲ್ಲಿ ನಾಯಕ ಹಾಗೂ ಹಿಂದುಳಿದ ಸಮುದಾಯವಿದ್ದು ಈ ಸಮುದಾಯದ ಮತ ಕೂಡ ಪ್ರಮುಖ ನಿರ್ಣಯಕ ಆಗಲಿವೆ. ಹೀಗಾಗಿ ಶ್ರೀರಾಮುಲು, ಕೋಟೆ ಚಿಕ್ಕಣ್ಣ, ವಿ.ಶ್ರೀನಿವಾಸ್ ಪ್ರಸಾದ್ ಮೊದಲಾದ ಸಮುದಾಯದ ನಾಯಕರ ಸಂದೇಶವೂ ಕ್ಷೇತ್ರದಲ್ಲಿ ಪರಿಣಾಮ ಬೀರಲಿವೆ. ಇವೆಲ್ಲವೂ ಯಾರ ಪರವಾಗಲಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಈ ಬಾರಿಯ ಚುನಾವಣೆಯು ಜಿಟಿಡಿಗೆ ಹ್ಯಾಟ್ರಿಕ್ ಗೆಲುವಿನ ಓಟ ಎನಿಸಿದರೆ, ಸಿದ್ದರಾಮಯ್ಯ ರಾಜಕೀಯದಾಟ ಏನಿರಲಿದೆ ಎಂಬುದರತ್ತ ಕ್ಷೇತ್ರದ ಜನರ ನೋಟ ನೆಟ್ಟಿದೆ. ಈ ನಡುವೆ ಕಮಲ ಪಾಳಯ ಕಾದು ನೋಡುವ ತಂತ್ರಗಾರಿಕೆಯಲ್ಲಿದೆ. ಈ ಮಧ್ಯೆ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವರ್ಚಸ್ಸು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
ಚಾಮುಂಡೇಶ್ವರಿಯಲ್ಲಿ ಜಾತಿ ಲೆಕ್ಕಾಚಾರ: ಜಿಲ್ಲೆಯಲ್ಲೇ ಅತಿದೊಡ್ಡ ಕ್ಷೇತ್ರ ಎಂದೆನಿಸಿಕೊಳ್ಳುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 75 ಸಾವಿರ ಒಕ್ಕಲಿಗ, 48 ಸಾವಿರ ಪರಿಶಿಷ್ಟ ಜಾತಿ, 35 ಸಾವಿರ ಕುರುಬ, 35 ಸಾವಿರ ಲಿಂಗಾಯತ, 30 ಸಾವಿರ ಪರಿಶಿಷ್ಟ ಪಂಗಡ, 14 ಸಾವಿರ ವಿಶ್ವಕರ್ಮ, 13815 ಬ್ರಾಹ್ಮಣ, 6 ಸಾವಿರ ಮುಸ್ಲಿಂ ಹಾಗೂ ಇತರೆ 40 ಸಾವಿರ ಮಂದಿ ಮತದಾರರಿದ್ದು, ಈ ಪೈಕಿ ಪುರುಷರು 1,49,999, ಮಹಿಳೆಯರು 1,45,881 ಸೇರಿ ಒಟ್ಟು 2,96,815 ರೆಂದು ಅಂದಾಜಿಸಲಾಗಿದೆ.
ಕ್ಷೇತ್ರದಲ್ಲಿ ಗೆದ್ದವರ ವಿವರ:
1978 - ಡಿ.ಜಯದೇವರಾಜ ಅರಸು (ಇಂದಿರಾ ಕಾಂಗ್ರೆಸ್)
1983 - ಸಿದ್ದರಾಮಯ್ಯ (ಪಕ್ಷೇತರ)
1985 - ಸಿದ್ದರಾಮಯ್ಯ (ಜನತಾ ಪಕ್ಷ)
1989 - ಎಂ.ರಾಜಶೇಖರಮೂರ್ತಿ (ಕಾಂಗ್ರೆಸ್)
1994 - ಸಿದ್ದರಾಮಯ್ಯ (ಜನತಾದಳ)
1994 - ಎ.ಎಸ್.ಗುರುಸ್ವಾಮಿ (ಕಾಂಗ್ರೆಸ್)
2004 - ಸಿದ್ದರಾಮಯ್ಯ (ಜೆಡಿಎಸ್)
2006 - ಸಿದ್ದರಾಮಯ್ಯ (ಕಾಂಗ್ರೆಸ್) ಉಪಚುನಾವಣೆ
2028 - ಎಂ.ಸತ್ಯನಾರಾಯಣ (ಕಾಂಗ್ರೆಸ್)
2013 - ಜಿ.ಟಿ.ದೇವೇಗೌಡ (ಜೆಡಿಎಸ್)
2018 - ಜಿ.ಟಿ.ದೇವೇಗೌಡ (ಜೆಡಿಎಸ್)
ಇದನ್ನೂ ಓದಿ: ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?