ಮೈಸೂರು: ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ಹಂಚಿಕೆ ಮಾಡಿರುವ ಸಂಬಂಧ ಮಾಜಿ ಶಾಸಕ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರೂ ಆಗಿರುವ ಯತಿಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಸಮಗ್ರ ತನಿಖೆ ನಡೆಸುವಂತೆ ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಘಟಕ ಹಾಗೂ ಬಿಜೆಪಿ ಮುಖಂಡರಾದ ಭಾಸ್ಕರ್ ರಾವ್ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಡಿವಾಳ ಸಮುದಾಯದ ಸಾವಿರಾರು ಜನರಿಗೆ ನನ್ನ ತಂದೆ ಸಿದ್ದರಾಮಯ್ಯ ಅವರ ಕಡೆಯಿಂದ ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷ ನಂಜಪ್ಪನವರು, ಸಾವಿರಾರು ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿಕೆ ಮಾಡಿದ್ದಾರೆ ಎಂಬ ಬಗ್ಗೆ ನಂಜನಗೂಡಿನ ಮಡಿವಾಳ ಸಮುದಾಯದ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಭಾನುವಾರ ಸಂಜೆ ನಂಜನಗೂಡಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗ್ರಾಮಾಂತರ ಬಿಜೆಪಿ ಪರವಾಗಿ ಎ.ಎನ್.ರಂಗು ಎಂಬವರ ಮೂಲಕ ದೂರು ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಭಾಸ್ಕರ್ ರಾವ್ ಮಾತನಾಡಿ, ಸೆಪ್ಟೆಂಬರ್ 15 ರ ಶುಕ್ರವಾರ ನಂಜನಗೂಡಿನ ಮಡಿವಾಳ ಸಮುದಾಯ ಭವನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪುತ್ರ ಯತಿಂದ್ರ ಸಿದ್ದರಾಮಯ್ಯ ಮಾತನಾಡಿ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ತಂದೆಯ ಗೆಲುವಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಾವಿರಾರು ಜನರಿಗೆ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ವಿತರಿಸಿದರು ಎಂಬ ಹೇಳಿಕೆಯ ಬಗ್ಗೆ ತನಿಖೆ ಮಾಡಬೇಕು. ಆ ದೃಷ್ಟಿಯಿಂದ ದೂರು ದಾಖಲು ಮಾಡಲಾಗಿದೆ. ಈ ರೀತಿ ಆಮಿಷ ತೋರಿಸುವುದು ಅಪರಾಧ. ಈ ಬಗ್ಗೆ ತನಿಖೆ ನಡೆಸಬೇಕೆಂಬ ಉದ್ದೇಶದಿಂದ ದೂರು ದಾಖಲು ಮಾಡಲಾಗಿದೆ ಎಂದರು.
ದೂರು ಸ್ವೀಕರಿಸಿರುವ ನಂಜನಗೂಡು ವಲಯದ ಡಿವೈಎಸ್ಪಿ ಗೋವಿಂದ ರಾಜ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದು, ದೂರು ಸ್ವೀಕರಿಸಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕುಕ್ಕರ್, ಐರನ್ ಬಾಕ್ಸ್ಅನ್ನು ಸಿದ್ದರಾಮಯ್ಯ ಹಂಚಿಲ್ಲ: ಯತೀಂದ್ರ ಸ್ಪಷ್ಟನೆ
ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚಿಲ್ಲ- ಯತೀಂದ್ರ ಸ್ಪಷ್ಟನೆ: ಮಾಧ್ಯಮದವರು ಇದನ್ನು ಅನಗತ್ಯವಾಗಿ ಸುದ್ದಿ ಮಾಡುತ್ತಿದ್ದಾರೆ. ನಂಜನಗೂಡಿನ ಮಡಿವಾಳ ಸಮಾಜದ ಕೃತಜ್ಞತಾ ಸಭೆಯಲ್ಲಿ ಸರಿಯಾಗಿ ಅರ್ಥ ಬರುವ ಹಾಗೆ ನಾನು ಮಾತನಾಡದೇ ಇರಬಹುದು. ಆದರೆ, ತಂದೆಯವರು ಕುಕ್ಕರ್, ಐರನ್ ಬಾಕ್ಸ್ ವಿತರಣೆ ಮಾಡಿದರು ಎಂದು ಹೇಳಿಲ್ಲ. ಮಡಿವಾಳ ಸಂಘದ ರಾಜ್ಯಾಧ್ಯಕ್ಷರು ತಮ್ಮ ಸ್ವಂತ ದುಡ್ಡಿನಲ್ಲಿ ವಿತರಣೆ ಮಾಡಿದ್ದಾರೆ. ಕೇವಲ ವರುಣಾ ಕ್ಷೇತ್ರಕ್ಕೆ ಮಾತ್ರವಲ್ಲ, ಹಾವೇರಿ, ದೇವನಹಳ್ಳಿ, ಯಾದಗಿರಿ ಕ್ಷೇತ್ರಗಳಲ್ಲೂ ಹಂಚಿಕೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಡಿವಾಳ ಸಮಾಜದವರಿಗೆ ಐರನ್ ಬಾಕ್ಸ್ ಹಾಗೂ ಕುಕ್ಕರ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುವ ವೈರಲ್ ವಿಡಿಯೋ ಕುರಿತು ಸ್ವತಃ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.