ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಗುರುವಾರ ಮತಯಾಚಿಸಿದರು. ವರುಣ ಕ್ಷೇತ್ರದ ರಾಂಪುರ, ಮರಳೂರು, ಗೊದ್ದನಪುರ, ತಾಂಡವಪುರದಲ್ಲಿ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಯುವ ನಟಿ ನಿಶ್ವಿಕಾ ನಾಯ್ಡು ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಮತಯಾಚನೆ ಮಾಡಿ ಭರ್ಜರಿ ರೋಡ್ ಶೋ ನಡೆಸಿದರು.
ಮೋಹಕ ತಾರೆ ರಮ್ಯಾ ಭರ್ಜರಿ ಪ್ರಚಾರ: ವರುಣಾ ವಿಧಾನಸಭಾ ಕ್ಷೇತ್ರದ ಕೆಂಪಿಸಿದ್ದನ ಹುಂಡಿಯಲ್ಲಿ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಕ್ಷೇತ್ರದ ವ್ಯಾಪ್ತಿಗೆ ಬರುವ ಕೆಂಪಿಸಿದ್ದನ ಹುಂಡಿ, ಹಿಮ್ಮಾವು, ಹುಳಿಮಾವು, ಬೊಕ್ಕಹಳ್ಳಿ, ಹೊಸಕೋಟೆ, ಸುತ್ತೂರು, ಬಿಳಿಗೆರೆ, ನಗರ್ಲೆ ಗ್ರಾಮಗಳಲ್ಲಿ ಸಿದ್ದರಾಮಯ್ಯ ಅವರ ಜೊತೆ ನಟಿ ರಮ್ಯಾ ಬಿರುಸಿನ ಮತಯಾಚನೆ ಮಾಡಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ರಮ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿದಿದ್ದರು.
ಅಮಿತ್ ಶಾ ಮತ್ತು ಯಡಿಯುರಪ್ಪ ಪ್ರಚಾರ: ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭರ್ಥಿ ವಿ ಸೋಮಣ್ಣ ಪರ ಕಳೆದ ಮಂಗಳವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ವರುಣಾದಲ್ಲಿ ಪ್ರಚಾರ ಸಭೆ ನಡೆಸಿ ಪ್ರಚಾರ ನಡೆಸಿದರು.
ಈ ವೇಳೆ ಅಮಿತ್ ಶಾ ಮಾತನಾಡಿ, ಇದೊಂದು ಮಹತ್ವದ ಚುನಾವಣೆ, ವರುಣ ರಾಜ್ಯದ ಚುನಾವಣೆಯಲ್ಲಿ ಅತ್ಯಂತ ಪ್ರಮುಖವಾಗಿದೆ. ಸೋಮಣ್ಣನವರನ್ನ ಗೆಲ್ಲಿಸಿದರೆ ಮುಂದೆ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ. ಕರ್ನಾಟಕ ಸುರಕ್ಷಿತವಾಗಿ ಹಾಗೂ ಸಮೃದ್ಧವಾಗಿ ಇರಬೇಕಾದರೆ ಅದು ಮೋದಿಯವರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಗೆದ್ದು ಕಳೆದ ಬಾರಿ ಹೈಕಮಾಂಡ್ಗೆ ಎಟಿಎಂ ಆಗಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್ಐ ಬ್ಯಾನ್ ಮಾಡಿರುವುದನ್ನು ವಾಪಸ್ ಪಡೆಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪೊಳ್ಳು ಭರವಸೆಗಳಿಗೆ ಬೆಲೆತೆರುವ ಮುನ್ನ ಒಮ್ಮೆ ಯೋಚಿಸಿ.. ಮತದಾರರಿಗೆ ಬೆಂಗಳೂರು ನಗರ ತಜ್ಞರ ಕಿವಿಮಾತು